ನವದೆಹಲಿ: ಮಾನವೀಯತೆಯು ಮಹಾಮಾರಿ ಕರೊನಾ ವೈರಸ್ ಅನ್ನು ಜಯಿಸುತ್ತದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ವಿರುದ್ಧ ಹೋರಾಡಲು ಲಾಕ್ಡೌನ್ ಸಮಯದಲ್ಲಿ ಜನರಿಗೆ ನೆರವಾದ ವಿವಿಧ ಸಚಿವಾಲಯಗಳನ್ನು ಶನಿವಾರ ಪ್ರಶಂಸಿಸಿದರು.
ಸ್ವಿಟ್ಜರ್ಲೆಂಡಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಇಡೀ ವಿಶ್ವವೇ ಕರೊನಾ ವಿರುದ್ಧ ಒಟ್ಟಾಗಿ ಹೋರಾಡುತ್ತಿದೆ. ಮಾನವೀಯತೆ ಖಂಡಿತವಾಗಿಯು ಮಹಾಮಾರಿಯನ್ನು ಮಣಿಸುತ್ತದೆ ಎಂದರು.
ಭಾರತೀಯರೆಲ್ಲರೂ ಕೋವಿಡ್-19 ಹೋರಾಟದಲ್ಲಿ ಒಗ್ಗಟ್ಟಾಗಿದ್ದಾರೆಂದು ಸಾರಲು ಸ್ವಿಟ್ಜರ್ಲೆಂಡಿನ ಜೆರ್ಮ್ಯಾಟ್ನಲ್ಲಿರುವ ಮ್ಯಾಟರ್ಹೋಮ್ ಪರ್ವತದ ಮೇಲೆ 1000 ಮೀಟರ್ ಗಾತ್ರದ ಭಾರತದ ತ್ರಿವರ್ಣ ಧ್ವಜವನ್ನು ಲೈಟಿಂಗ್ಸ್ ಮೂಲಕ ಪ್ರದರ್ಶಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ರಾಯಭಾರ ಕಚೇರಿ ಇಂತಹ ಶುಭಸಂಕೇತಕ್ಕಾಗಿ ಜೆರ್ಮ್ಯಾಟ್ ಟೂರಿಸಂಗೆ ದೊಡ್ಡ ಧನ್ಯವಾದಗಳು ಎಂದಿದೆ.
ಇದೇ ವೇಳೆ ಲಾಕ್ಡೌನ್ ಸಮಯದಲ್ಲಿ ಜನರಿಗೆ ಹೇಗೆ ನೆರವಾದೆವು ಎಂಬುದನ್ನು ತಿಳಿಸಲು ವಿವಿಧ ಸಚಿವಾಲಯಗಳು ಮತ್ತು ಸಚಿವರು ಮಾಡಿರುವ ಟ್ವೀಟ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಸಚಿವ ಪಿಯೂಷ್ ಗೋಯೆಟ್ ಟ್ವೀಟ್ಗೆ ಉತ್ತರಿಸಿದ ಪ್ರಧಾನಿ, ಮಹತ್ವದ ಸಮಯದಲ್ಲಿ ದೇಶದ ನಾಗರಿಕರಿಗೆ ನಿರಂತರವಾಗಿ ಸಹಾಯಾಸ್ತ ಚಾಚಿರುವ ಭಾರತೀಯ ರೈಲ್ವೆ ತಂಡದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಲಾಕ್ಡೌನ್ ಸಮಯದಲ್ಲಿ ಪ್ಯಾಸೆಂಜರ್ ರೈಲುಗಳು ಸ್ತಬ್ಧವಾಗಿದ್ದರೂ, ರೈಲ್ವೆ ಸಚಿವಾಲಯ ಕಾರ್ಯ ಮುಂದುವರಿಸಿದೆ ಎಂದು ಗೋಯೆಲ್ ಟ್ವೀಟ್ ಮಾಡಿದ್ದರು.
ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿ, ದಿಗ್ಬಂಧನ ಸಮಯದಲ್ಲಿ ತಮ್ಮ ಜವಾಬ್ದಾರಿಗಳನ್ನು ಮರೆಯದೇ ಜನರಿಗೆ ಅಗತ್ಯ ವಸ್ತವನ್ನು ಪೂರೈಸಿದ ಎಲ್ಪಿಜಿ ಸಿಲಿಂಡರ್ ಡಿಲಿವರಿ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ, ದೇಶದ ಇಂಧನ ಅಗತ್ಯಗಳನ್ನು ಪೂರೈಸಲು ದಿನದ 24 ಗಂಟೆಯೂ ಕೆಲಸ ಮಾಡಿದವರಿಗೆ ಗೌರವ ಸಿಗಲೆಂದರು.
ಸದ್ಯ ಭಾರತದಲ್ಲಿ ಸೋಂಕಿತರ ಪ್ರಕರಣ 14 ಸಾವಿರ ಸಮೀಪಿಸುತ್ತಿದ್ದು, 450ಕ್ಕೂ ಹೆಚ್ಚು ಮಂದಿ ಕರೊನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇಂದು ಸಂಜೆ ಟ್ವೀಟ್ ಮಾಡಿರುವ ಪ್ರಧಾನಿ ಯಾರು ಗಾಬರಿ ಪಡಬೇಡಿ. ಸರಿಯಾದ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಿ. ನಾವೆಲ್ಲರೂ ಸೇರಿ ಕರೊನಾ ಮಣಿಸೋಣ ಎಂದು ಕರೆ ನೀಡಿದ್ದಾರೆ. (ಏಜೆನ್ಸೀಸ್)