ನ್ಯೂಸ್

ಕರೊನಾ ವಿರುದ್ಧದ ಹೋರಾಟದಲ್ಲಿ ಸಿಎಂಗಳು ಮಾಡಿದ ಕೆಲಸದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ನವದೆಹಲಿ: ಕರೊನಾ ವೈರಸ್ ಹಾವಳಿ ತಡೆಯಲು ವಿಧಿಸಲಾಗಿರುವ ಮೂರನೇ ಹಂತದ ಲಾಕ್‌ಡೌನ್ ಅಂತಿಮ ಹಂತಕ್ಕೆ ಬರುತ್ತಿದ್ದಂತೆಯೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

‘‘ಈ ಹೋರಾಟದಲ್ಲಿ ಇಡೀ ವಿಶ್ವವೇ ನಮ್ಮ ಪ್ರಯತ್ನವನ್ನು ಮತ್ತು ಯಶಸ್ಸನ್ನು ಕೊಂಡಾಡುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರಗಳು ಬಹು ಮಹತ್ವದ ಪಾತ್ರ ನಿಭಾಯಿಸಿವೆ. ತಮ್ಮ ಹೊಣೆಗಾರಿಕೆ ಏನು ಎಂಬುದನ್ನು ಅರಿತು ಆ ಪ್ರಕಾರ ನಡೆದುಕೊಂಡಿವೆ’’ ಎಂದು ಮೋದಿ ಪ್ರಶಂಸೆ ವ್ಯಕ್ತಪಡಿಸಿದರು.

‘‘ಜನ ಎಲ್ಲಿದ್ದಾರೋ ಅಲ್ಲೇ ಇರಬೇಕು ಎಂಬುದಾಗಿ ನಾವು ಹೇಳಿದ್ದೆವು. ಆದರೆ ಕಷ್ಟ ಕಾಲದಲ್ಲಿ ತನ್ನ ಮನೆಗೆ ಹೋಗುವುದು ಮನುಷ್ಯನ ಮೂಲ ಸ್ವಭಾವಗಳಲ್ಲೊಂದು. ಆದ್ದರಿಂದಲೇ ನಾವು ನಮ್ಮ ನೀತಿ-ನಿರ್ಧಾರಗಳಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡೆವು. ಅದೇ ವೇಳೆ, ಕರೊನಾ ವೈರಸ್ ಹಳ್ಳಿಗಳಿಗೂ ಹರಡದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ಅದು ದೊಡ್ಡ ಸವಾಲೂ ಹೌದು’’ ಎಂದು ಮೋದಿ ಹೇಳಿದರು. ಇದು ಕರೊನಾಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜತೆಗಿನ ಮೋದಿಯವರ ಐದನೇ ವಿಡಿಯೋ ಕಾನ್ಫರೆನ್ಸ್.

ಸಭೆಯಲ್ಲಿ ಉಪಸ್ಥಿತರಿದ್ದ ಗೃಹ ಸಚಿವ ಅಮಿತ್ ಶಾ ಮಾತನಾಡಿ, ‘‘ಆರೋಗ್ಯಸೇತು ಮೊಬೈಲ್ ಅಪ್ಲಿಕೇಶನ್ ಅತ್ಯಂತ ಮಹತ್ವದ ಪಾತ್ರ ನಿಭಾಯಿಸುವ ಶಕ್ತಿ ಹೊಂದಿದೆ. ಅದನ್ನು ಜನಪ್ರಿಯಗೊಳಿಸಲು ಮತ್ತು ಎಲ್ಲರೂ ಬಳಸುವಂತೆ ಮಾಡಲು ಸಹಕಾರ ನೀಡಿ’’ ಎಂದು ಎಲ್ಲ ಮುಖ್ಯಮಂತ್ರಿಗಳನ್ನು ಕೋರಿದರು.

ಈ ಸಭೆಯಲ್ಲಿ 19ನೇಯವರಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಲಿದ್ದಾರೆ. ಪ್ರತಿಯೊಬ್ಬ ಸಿಎಂಗೂ ತಲಾ 20 ನಿಮಿಷ ಮಾತನಾಡಲು ಅವಕಾಶ ನೀಡಲಾಗಿದೆ.