ನ್ಯೂಸ್

ಅದಾನಿ ಸಮೂಹದ ಕಂಪನಿಗಳ ಷೇರುಗಳ ಬೆಲೆಯಲ್ಲಿ ಭಾರೀ ಕುಸಿತ: ಸೆಬಿ ನೋಟಿಸ್ ನೀಡಿದ್ದೇಕೆ?

ಮುಂಬೈ: ಷೇರು ಮಾರುಕಟ್ಟೆಯಲ್ಲಿನ ಏರಿಳಿತದ ನಡುವೆ ಅದಾನಿ ಗ್ರೂಪ್‌ನ ಷೇರುಗಳು ಜರ್ಝರಿತವಾಗಿವೆ. ಅದಾನಿ ಪವರ್‌ನಿಂದ ಟೋಟಲ್ ಗ್ಯಾಸ್‌ವರೆಗಿನ ವಿವಿಧ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತವಾಗಿದೆ.

ಅದಾನಿ ಷೇರುಗಳ ಕುಸಿತಕ್ಕೆ ಸೆಬಿಯ ಶೋಕಾಸ್ ನೋಟಿಸ್ ಕಾರಣವಾಗಿದೆ. ಸೋಮವಾರ ಮಾರುಕಟ್ಟೆ ಪ್ರಾರಂಭವಾದಾಗಿನಿಂದ ಅದಾನಿ ಷೇರುಗಳ ಬೆಲೆಗಳು ಕೆಂಪು ಬಣ್ಣದಲ್ಲಿವೆ. ಅದಾನಿ ಪವರ್ ಶೇ. 3.28ರಷ್ಟು ಕುಸಿದು ರೂ.584.85ಕ್ಕೆ ತಲುಪಿದೆ. ಅದಾನಿ ಎಂಟರ್‌ಪ್ರೈಜ್ ಶೇ. 4.27ರಷ್ಟು ಇಳಿಕೆಯಾಗಿ 2865.50 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಅದಾನಿ ಗ್ರೀನ್ ಎನರ್ಜಿ ಕೂಡ ಕೆಂಪು ಬಣ್ಣದಲ್ಲಿದ್ದು, ಶೇ. 1.93 ರಷ್ಟು ಕುಸಿದು 1765 ರೂ.ಗೆ ತಲುಪಿದೆ.

ಅದಾನಿ ಪೋರ್ಟ್​ ಷೇರು ಬೆಲೆ ಶೇ.4.47ರಷ್ಟು ಕುಸಿತವಾಗಿದ್ದು, 1261.30 ರೂ. ಮಟ್ಟ ಮುಟ್ಟಿದೆ. ಅದಾನಿ ಟೋಟಲ್ ಗ್ಯಾಸ್ ಕೂಡ ಶೇಕಡಾ 2.54 ರಷ್ಟು ಕುಸಿದು 906.80 ಕ್ಕೆ ತಲುಪಿದೆ. ಅದಾನಿ ಎನರ್ಜಿ ಸೊಲ್ಯೂಷನ್‌ನಲ್ಲಿ ಶೇಕಡಾ ಎರಡಕ್ಕಿಂತ ಹೆಚ್ಚು ಕುಸಿತವಾಗಿದ್ದು, 1039.70 ರೂ. ತಲುಪಿದ ಅದಾನಿ ವಿಲ್ಮಾರ್ ಷೇರು ಬೆಲೆ ಶೇ. 2ರಷ್ಟು ಕುಸಿದು 337.35 ರೂ. ಮುಟ್ಟಿದೆ. ಎಸಿಸಿ, ಅಂಬುಜಾ ಸಿಮೆಂಟ್ ಮತ್ತು ಎನ್‌ಡಿಟಿವಿ ಷೇರುಗಳ ಸಹ ಕುಸಿತ ದಾಖಲಿಸಿವೆ.

ಅದಾನಿ ಗ್ರೂಪ್‌ನ ಆರು ಕಂಪನಿಗಳು ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದಿಂದ (SEBI) ಸಂಬಂಧಿತ ಪಕ್ಷದ ವಹಿವಾಟುಗಳ ಉಲ್ಲಂಘನೆ ಮತ್ತು ಪಟ್ಟಿ ಮಾಡುವ ನಿಯಮಗಳನ್ನು ಅನುಸರಿಸದ ಕಾರಣಕ್ಕಾಗಿ ಶೋಕಾಸ್ ನೋಟಿಸ್‌ಗಳನ್ನು ಸ್ವೀಕರಿಸಿವೆ.

ಜನವರಿ 2023 ರಲ್ಲಿ ಅದಾನಿ ಗ್ರೂಪ್ ವಿರುದ್ಧ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯು ಕಾರ್ಪೊರೇಟ್ ವಂಚನೆ ಮತ್ತು ಷೇರು ಬೆಲೆ ಕುಶಲತೆ ಕುರಿತಂತೆ ಗಂಭೀರ ಆರೋಪಗಳನ್ನು ಮಾಡಿದ ನಂತರ ನಡೆಸಲಾದ ತನಿಖೆಯ ಭಾಗವಾಗಿ ಈ ಆರು ಕಂಪನಿಗಳಿಗೆ ಸೆಬಿ ನೋಟೀಸ್ ನೀಡಿದೆ.

ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಆ್ಯಂಡ್​ ಸ್ಪೇಸಲ್​ ಎಕನಾಮಿಕ್​ ಜೋನ್​, ಅದಾನಿ ಪವರ್, ಅದಾನಿ ಎನರ್ಜಿ ಸೊಲ್ಯೂಷನ್ಸ್, ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ವಿಲ್ಮರ್ ಕಂಪನಿಗಲು ಜನವರಿ-ಮಾರ್ಚ್ ತ್ರೈಮಾಸಿಕ ಮತ್ತು ಹಣಕಾಸು ವರ್ಷ 2023-24 ರ ಸೆಬಿ ಸೂಚನೆಯ ಪ್ರಕಾರ ತಮ್ಮ ಹಣಕಾಸಿನ ಫಲಿತಾಂಶಗಳಲ್ಲಿ ಮಾಹಿತಿಯನ್ನು ಬಹಿರಂಗಪಡಿಸಿವೆ.