ನ್ಯೂಸ್

ಬೃಹತ್ ಮಾದಕ ವಸ್ತು ಉತ್ಪಾದನ ಜಾಲ ಪತ್ತೆ; ಐಟಿ ತಜ್ಞ ಸೇರಿ 12 ಮಂದಿ ಬಂಧನ; 12 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶ| Drug Racket

Drug Racket: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರೋಡ್ ಪೊಲೀಸರು ಇಂದು(ಸೆ. 06) ತೆಲಂಗಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೃಹತ್ ಮಾದಕವಸ್ತು ಉತ್ಪಾದನಾ ಜಾಲವನ್ನು ಬೇಧಿಸಿದ್ದು, ಐಟಿ ತಜ್ಞ ಸೇರಿ 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ 12 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಖಚಿತ ಮಾಹಿತಿ ಮೇರೆಗೆ ಮೀರಾ-ಭಾಯಂದರ್, ವಸೈ-ವಿರಾರ್ ಪೊಲೀಸರು ಮತ್ತು ಅಪರಾಧ ವಿಭಾಗ ಜಂಟಿಯಾಗಿ ಸುಮಾರು ಒಂದು ತಿಂಗಳ ಕಾಲ ನಿಗಾ ಇರಿಸಿದ ನಂತರ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿವೆ.ತೆಲಂಗಾಣದ ಚೇರಮಲ್ಲಿ ಪ್ರದೇಶದ ಕಾರ್ಖಾನೆಯೊಂದರಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುವ ಸುಮಾರು 35,000 ಲೀಟರ್ ರಾಸಾಯನಿಕ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ರಾಸಾಯನಿಕ ಕಾರ್ಖಾನೆಯ ಸೋಗಿನಲ್ಲಿ ರಹಸ್ಯವಾಗಿ ಮಾದಕ ವಸ್ತು ತಯಾರಿಸಲಾಗ್ತಿತ್ತು. ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕಾರ್ಖಾನೆಯಲ್ಲಿ ನೂರಾರು ಕಿಲೋಗಳಷ್ಟು ಮೆಫೆಡ್ರೋನ್ ಔಷಧವನ್ನು ತಯಾರಿಸಿ ಸ್ಥಳೀಯ ಅಪರಾಧಿಗಳು ಮತ್ತು ಏಜೆಂಟ್‌ಗಳ ಮೂಲಕ ಮುಂಬೈಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಮೀರಾ ರಸ್ತೆಯಲ್ಲಿ ಕಳೆದ ತಿಂಗಳು 24 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯಗಳೊಂದಿಗೆ ಸಿಕ್ಕಿಬಿದ್ದ ಬಾಂಗ್ಲಾದೇಶದ ಮಹಿಳೆ ಸೇರಿದಂತೆ ಪ್ರಕರಣದಲ್ಲಿ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ. ಆಕೆಯನ್ನು ಫಾತಿಮಾ ಮುರಾದ್ ಶೇಖ್ ಅಲಿಯಾಸ್ ಮೊಲ್ಲಾ (23) ಎಂದು ಗುರುತಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಐಟಿ ತಜ್ಞರಾಗಿದ್ದು, ಅವರು ಅಪರಾಧಕ್ಕಾಗಿ ರಾಸಾಯನಿಕಗಳ ಬಗ್ಗೆ ತಮ್ಮ ಜ್ಞಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ವಿದೇಶಿ ಪ್ರಜೆಯ ಕೈವಾಡ ಇರುವುದರಿಂದ ಪ್ರಕರಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)