ನ್ಯೂಸ್

ಅಸ್ಸಾಂ ಸಿಟಿಸಿ ಚಹಾಗೆ ಭರ್ಜರಿ ಡಿಮ್ಯಾಂಡು: ಹರಾಜಿನಲ್ಲಿ ದೊರೆತ ದಾಖಲೆಯ ಬೆಲೆ ಎಷ್ಟು ಗೊತ್ತೆ?

ಕೋಲ್ಕತ್ತಾ: ಅಸ್ಸಾಂ ಸಿಟಿಸಿ ಚಹಾವು ಒಂದು ಕಿಲೋಗ್ರಾಂ 1,506 ರೂಪಾಯಿಗೆ ಮಾರಾಟವಾಗುವುದರೊಂದಿಗೆ ಇದುವರೆಗಿನ ಅತ್ಯಧಿಕ ಹರಾಜು ಬೆಲೆಯನ್ನು ಪಡೆದುಕೊಂಡಿದೆ.

ಹರಾಜುದಾರರಾದ ಅಸ್ಸಾಂ ಟೀ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ನಿಶೀತ್ ಬಿಜಾವತ್ ಮಾತನಾಡಿ, ಈ ನಿರ್ದಿಷ್ಟ ಮಾರಾಟವು ಜೂನ್ 11 ರಂದು ಕೋಲ್ಕತ್ತಾದ ಹರಾಜಿನಲ್ಲಿ ನಡೆದಿದೆ. ಹೈದರಾಬಾದ್‌ನಲ್ಲಿ ನಮ್ಮ ಗ್ರಾಹಕರಾದ ಮಿಹಿರ್ ಗೋಲ್ಡ್ ಪರವಾಗಿ ಇದನ್ನು ಖರೀದಿಸಲಾಗಿದೆ ಎಂದು ತಿಳಿಸಿದ್ದಾರೆ.

"ಯಾವುದೇ ಸಿಟಿಟಿ ಚಹಾವು ಹರಾಜಿನಲ್ಲಿ ಪಡೆದ ಅತ್ಯಧಿಕ ಬೆಲೆ ಇದಾಗಿದೆ. ಈ ನಿರ್ದಿಷ್ಟ ತಳಿಯ ಮಾರಾಟಕ್ಕೆ ನೀಡಲಾದ ಚಹಾದ ಪ್ರಮಾಣವು ಅಂದಾಜು 420 ಕಿಲೋಗ್ರಾಂ" ಎಂದು ಅವರು ತಿಳಿಸಿದ್ದಾರೆ.

ಸಿಟಿಸಿ (ಕ್ರಶ್, ಟಿಯರ್, ಕರ್ಲ್) ತಳಿಯ ಈ ಹಿಂದಿನ ಅತಿಹೆಚ್ಚು ಮಾರಾಟದ ಬೆಲೆಗಳು ಕಿಲೋಗೆ ರೂ 1,111 ಮತ್ತು ಕಿಲೋಗೆ ರೂ 803 ಆಗಿತ್ತು.