ನ್ಯೂಸ್

ದಳಪತಿ ವಿಜಯ್ ಪ್ರವಾಸಕ್ಕೆ ಜನಸ್ತೋಮ; ನಟಿ ನಯನತಾರಾ ಬಂದ್ರೆ ಅದಕ್ಕಿಂತ ಎರಡುಪಟ್ಟು ಜನ ಸೇರ್ತಾರೆ: ಸೀಮಾನ್ ವ್ಯಂಗ್ಯ| S Seeman

S Seeman: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಕಾವು ಏರತೊಡಗಿದೆ. ಹೊಸದಾಗಿ ಟಿವಿಕೆ ಪಕ್ಷ ಸ್ಥಾಪಿಸಿ ದಳಪತಿ ವಿಜಯ್ ಕೈಗೊಂಡಿರುವ ರಾಜ್ಯ ಪ್ರವಾಸಕ್ಕೆ ಭಾರೀ ಜನಸಮೂಹ ಸೇರುತ್ತಿದೆ.  ಈ ಕುರಿತು ವ್ಯಂಗ್ಯವಾಡಿರುವ ನಾಮ್ ತಮಿಳರ್ ಕಚ್ಚಿ(ಎನ್​ಟಿಕೆ) ಮುಖ್ಯಸ್ಥ ಎಸ್​.ಸೀಮಾನ್ ನಯನತಾರಾ ರಸ್ತೆಗೆ ಬಂದ್ರೆ ಅದಕ್ಕಿಂತ ಎರಡುಪಟ್ಟು ಜನ ಸೇರ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸೋಮವಾರ(ಸೆ. 15) ಕೊಯಮತ್ತೂರಿನಲ್ಲಿ ಮಾತನಾಡಿದ ಎಸ್​.ಸೀಮಾನ್, ಸಿನಿಮಾದಲ್ಲಿ ತಮ್ಮ ನಟನನ್ನು ನೋಡುವ ಅಭ್ಯಾಸವಿರುವ ಜನಸಾಮಾನ್ಯರಿಗೆ ನೇರವಾಗಿ ಹೊರಗೆ ಬಂದ್ರೆ ನೋಡಲು ಬರುತ್ತಾರೆ. ನಟರಾದ ಅಜಿತ್ ಕುಮಾರ್ ಮತ್ತು ರಜನಿಕಾಂತ್ ಸಾರ್ವಜನಿಕರ ಮುಂದೆ ಕಾಣಿಸಿಕೊಂಡರೆ ಇನ್ನೂ ಹೆಚ್ಚಿನ ಜನಸಮೂಹ ಸೇರುತ್ತಿತ್ತು. ಇನ್ನೂ ನಟಿ ನಯನತಾರಾ ಬಂದರೆ, ಅದಕ್ಕಿಂತ ಎರಡುಪಟ್ಟು ಜನಸಮೂಹ ಸೇರುತ್ತಿತ್ತು ಎಂದು ಹೇಳಿದರು.

ಯಾವುದೇ ಪಕ್ಷಕ್ಕೆ ಜನಸಂದಣಿಯ ಗಾತ್ರ ಮುಖ್ಯವಲ್ಲ, ಅದರ ಸಿದ್ಧಾಂತ ಮುಖ್ಯ. ಎನ್​​ಟಿಕೆ ಯಾವುದೇ ರಾಷ್ಟ್ರೀಯ ಮತ್ತು ದ್ರಾವಿಡ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ತಮಿಳುನಾಡಿನಲ್ಲೂ ಜಾತಿಗಣತಿ ನಡೆಸುವಂತೆ ಒತ್ತಾಯಿಸಿದ ಸೀಮಾನ್, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡದ ಇತರ ರಾಜ್ಯಗಳು ಜಾತಿಗಣತಿಯನ್ನು ನಡೆಸುತ್ತಿವೆ. ಆದರೆ ಯಾವಾಗಲೂ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ತಮಿಳುನಾಡು ಯಾಕೆ ನಡೆಸಲು ಹಿಂಜರಿಯುತ್ತಿದೆ ಎಂದು ಪ್ರಶ್ನಿಸಿದರು.

ಸಂಗೀತ ಮಾಂತ್ರಿಕ ಇಳಯರಾಜಗೆ ಭಾರತ ರತ್ನಕ್ಕೆ ಬೆಂಬಲ

ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಎಂ.ಕೆ.ಸ್ಟಾಲಿನ್ ಮನವಿಯನ್ನು ಸ್ವಾಗತಿಸಿದ ಸೀಮಾನ್, ಇಳಯರಾಜ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗೆ ದೊರೆತರೆ ಹೆಮ್ಮೆ. ನಾನು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲು ಅವಕಾಶ ನೀಡುವಂತೆ ಕೇಳಿದ್ದೆ, ಆದರೆ ಅವರು ರಾಜ್ಯ ಸರ್ಕಾರವೇ ಅದನ್ನು ಆಯೋಜಿಸುತ್ತದೆ ಎಂದು ಹೇಳಿದರು. ಶೀಘ್ರದಲ್ಲಿ ನಾವು ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ತಿಳಿಸಿದರು. (ಏಜೆನ್ಸೀಸ್)