ತಿರುವಂತಪುರ: ಮಾಡೆಲ್‌ಗಳನ್ನು ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿದ್ದ ಜಾಲವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ
.
ಬಹುಭಾಷಾ ನಟಿ ಶಮ್ನಾ ಕಾಸಿಂ ಅವರನ್ನೂ ತಮ್ಮ ಬಲೆಗೆ ಬೀಳಿಸಿಕೊಂಡು ಹಣ ಕೀಳುವ ಪ್ರಯತ್ನ ಮಾಡಿದ್ದ ಕೇರಳದ ಈ ಆರೋಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಾರೆ. ನಟಿಯ ತಂದೆ ನೀಡಿರುವ ದೂರಿನ ಅನ್ವಯ ಅನ್ವರ್ ಅಲಿ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದವರಿಗಾಗಿ ಜಾಲ ಬೀಸಿದ್ದಾರೆ.
ಅಷ್ಟಕ್ಕೂ ಈ ಜಾಲ ಮಾಡುತ್ತಿದುದು ಏನೆಂದರೆ ತಾವೊಂದು ದೊಡ್ಡ ಬಿಜಿನೆಸ್‌ಮೆನ್, ಆಗರ್ಭ ಶ್ರೀಮಂತರು ಎಂದು ಹೇಳಿಕೊಂಡು ರೂಪದರ್ಶಿಗಳನ್ನು, ನಟಿಯರನ್ನು ಗಾಳ ಹಾಕುತ್ತಿದ್ದರು. ಅವರ ಬಣ್ಣದ ಮಾತಿಗೆ, ಸಿರಿವಂತಿಕೆಗೆ ಮರಳಾಗುತ್ತಿದ್ದ ಮಾಡೆಲ್‌ಗಳು ಹಾಗೂ ಕೆಲವು ಪ್ರಕರಣಗಳಲ್ಲಿ ಅವರ ಪಾಲಕರು ನಂತರ ಇವರ ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದರು.
ಇದೇ ರೀತಿ, ಕಳೆದ ಮಾರ್ಚ್ ತಿಂಗಳಲ್ಲಿ ಮದುವೆಯ ವಿಚಾರವಾಗಿ ಆರೋಪಿಗಳು ಶಮ್ನಾ ಅವರ ಬಳಿ ಮಾತನಾಡಿದ್ದಾರೆ. ತಮ್ಮ ಕಡೆ ಅನ್ವರ್ ಅಲಿ ಎಂಬ ವರನೊಬ್ಬ ಇದ್ದು, ದುಬೈನಲ್ಲಿ ಆಭರಣಗಳ ಬಿಜಿನೆಸ್ ಮಾಡುತ್ತಾನೆ. ಅವರ ಕುಟುಂಬ ಕೋಝಿಕ್ಕೊಡ್ನಲ್ಲಿ ನೆಲೆಸಿದ್ದು, ನೀವು ಅವರಿಗೆ ತುಂಬಾ ಇಷ್ಟವಾಗಿದ್ದೀರಿ ಎಂದಿದ್ದಾರೆ. ನಟಿ ಈ ಬಗ್ಗೆ ತನ್ನ ತಂದೆಯ ಬಳಿ ಪ್ರಸ್ತಾಪಿಸಿದ್ದಾರೆ.
ಆಗರ್ಭ ಶ್ರೀಮಂತ ವರ ಎಂದು ತಿಳಿಯುತ್ತಲೇ ಮನೆಗೆ ಬಂದು ಮಾತನಾಡುವಂತೆ ತಂದೆ ಹೇಳಿದ್ದಾರೆ. ನಂತರ ಮನೆಗೆ ಬಂದ ಆರೋಪಿಗಳು ಅವರ ಅರಿವಿಗೆ ಬಾರದಂತೆ ಕೆಲವು ಕಡೆಗಳಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ಕೆಲವೊಂದು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಹೋಗಿದ್ದಾರೆ.
ನಂತರ ಇನ್ನೊಮ್ಮೆ ಬಂದಾಗ, ಆದರೆ ನಮ್ಮ ಸ್ಟೇಟಸ್ಗೆ ಹೊಂದಿಕೆಯಾಗುವುದಿಲ್ಲ ಎಂದು ಶಮ್ನಾ ಕಾಸಿಂ ಅವರ ತಂದೆ ವಿವಾಹ ಪ್ರಸ್ತಾವನೆಯನ್ನು ನಿರಾಕರಿಸಿದ್ದರು. ನಂತರ ಆ ವಿಡಿಯೋಗಳನ್ನು ಇವರ ಮುಂದಿಟ್ಟು, ಹಣದ ಬೇಡಿಕೆ ಒಡ್ಡಿದ್ದಾರೆ. ಹಣ ನೀಡದೇ ಹೋದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೇಳಿದ್ದಾರೆ. ಅದಕ್ಕೆ ಜಗ್ಗದ ನಟಿಯ ತಂದೆ ದೂರು ದಾಖಲು ಮಾಡಿದ್ದಾರೆ.
ಬೆದರಿಕೆ ಕರೆಗಳನ್ನು ಟ್ರ್ಯಾಪ್ ಮಾಡಿದ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರೆಲ್ಲರೂ ತ್ರಿಶೂರ್ ಮೂಲದವರು ಎನ್ನಲಾಗಿದೆ.
ಪೊಲೀಸರು ತಮ್ಮದೇ ರೀತಿಯಲ್ಲಿ ಇವರ ಬಾಯಿ ಬಿಡಿಸಿದಾಗ ಹಲವಾರು ಮಾಡೆಲ್‌ಗಳಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಮಾಡೆಲ್‌ಗಳ ಜತೆ ಸಲುಗೆ ಮಾಡಿಕೊಂಡು ನಂತರ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕುವ ಮೂಲಕ, ಅವರಿಂದ ಹಣ, ಚಿನ್ನವನ್ನು ದೋಚಿರುವುದಾಗಿ ಪೊಲೀಸರಿಗೆ ತಿಳಿದಿದೆ. ತನಿಖೆ ಮುಂದುವರೆದಿದೆ.
ಇನ್ನು ಶಮ್ನಾ ಕಾಸಿಂ ಅವರ ಬಗ್ಗೆ ಹೇಳುವುದಾದರೆ, ಇವರು 2007ರಲ್ಲಿ ನಟನಾ ವೃತ್ತಿಜೀವನ ಪ್ರಾರಂಭಿಸಿದ್ದಾರೆ. ಮಲಯಾಳ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಕೆಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ. , ರಮೇಶ್ ಅರವಿಂದ್ ಅಭಿನಯದ 100 ಚಿತ್ರದಲ್ಲೂ ಇವರು ಅಭಿನಯಿಸುತ್ತಿದ್ದಾರೆ.