ಶಿವಮೊಗ್ಗ: ಆಂಧ್ರಪ್ರದೇಶದ ತಿರುಪತಿ ಲಡ್ಡುವಿಗೆ ಹಸುವಿನ ಕೊಬ್ಬು, ಮೀನಿನ ಎಣ್ಣೆ ಸೇರಿಸಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ: ಸಿಬಿಐ ತನಿಖೆಗೆ ಆಗ್ರಹಿಸಿ ಅಮಿತ್ ಷಾಗೆ ಪತ್ರ ಬರೆದ ಜಗನ್ ರೆಡ್ಡಿ ಸಹೋದರಿ ಶರ್ಮಿಳಾ…?
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿ ಲಡ್ಡು ಕೇವಲ ಪ್ರಸಾದವಲ್ಲ. ಅದು ಭಕ್ತಿಯ ಒಂದು ರೂಪ. ವಿಶ್ವದ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವ ಕೆಲಸ ಆಗಿದೆ. ಪ್ರಸಾದಕ್ಕೆ ಕೊಬ್ಬು ಸೇರಿಸುವಂತಹ ರಾಕ್ಷಸಿ ಪ್ರವೃತ್ತಿಗೆ ಯಾರೂ ಕೂಡ ಇಳಿಯಬಾರದಾಗಿತ್ತು. ಆದರೆ ಆಂಧ್ರದ ಮಾಜಿ ಸಿಎಂ ಜಗನ್‌ಮೋಹನ್‌ರೆಡ್ಡಿ ಇಂತಹ ಕೃತ್ಯದಲ್ಲಿ ಪಾಲ್ಗೊಂಡಿರುವುದು ಅತ್ಯಂತ ಖೇದರಕರ ಸಂಗತಿ ಎಂದು ಕಿಡಿಕಾರಿದರು.
ಆಂಧ್ರಪ್ರದೇಶದದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಮತಾಂತರಗೊಂಡ ಕ್ರಿಶ್ಚಿಯನ್. ಅವರ ಆಡಳಿತ ಅವಧಿಯಲ್ಲಿ ತಿರುಪತಿ ಲಡ್ಡುವಿಗೆ ಹಿಂದುಗಳ ಗೋಮಾತೆಯಾದ ಹಸುವಿನ ಕೊಬ್ಬು, ಮೀನಿನ ಎಣ್ಣೆ ಸೇರಿಸಿದ್ದಾರೆಂಬುದು ಹಿಂದೂಗಳ ಭಾವನೆಗೆ ನೋವುಂಟು ಮಾಡಿದೆ. ಇದು ಅತ್ಯಂತ ದುರದೃಷ್ಟಕರ. ಕೂಡಲೇ ಅವರು ಹಿಂದೂ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕೃತ್ಯದಲ್ಲಿ ಯಾವ ಯಾವ ಕ್ರೈಸ್ತ ಮಿಷನರಿಗಳು ಕೆಲಸ ಮಾಡಿವೆ ಎಂಬುದನ್ನು ಹೊರ ತರಬೇಕಾದರೆ ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತವಾಗಿದ್ದು, ಇಡೀ ಹಗರಣವನ್ನು ಬೆಳಕಿಗೆ ತಂದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಅಭಿನಂದಿಸುವುದಾಗಿ ಈಶ್ವರಪ್ಪ ಹೇಳಿದರು.
ಇನ್ನು ಮುಂದಾದರೂ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಅನ್ಯಧರ್ಮೀಯರ ಪಾಲ್ಗೊಳ್ಳುವಿಕೆ ಮತ್ತು ಹಸ್ತಕ್ಷೇಪವನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ನಿಲುವು ತಾಳಬೇಕೆಂದು ಪ್ರಧಾನಿ ಮೋದಿ ಅವರಿಗೆ ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಈಶ್ವರಪ್ಪ ಮನವಿ ಮಾಡಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಎಸ್.ಜಿ.ಬಾಲು, ಶಿವಾಜಿ, ದಿನೇಶ್ ಸುದ್ದಿಗೋಷ್ಠಿಯಲ್ಲಿದ್ದರು.