ನ್ಯೂಸ್

ಟ್ರಂಪ್ ಸುಂಕ ಸಮರ ಭಾರತಕ್ಕೆ ಹೇಗೆಲ್ಲ ಎಫೆಕ್ಟ್​? ಸಂಸತ್ತಿನಲ್ಲಿ ಪಿಯೂಷ್ ಗೋಯಲ್ ಹೇಳಿದ್ದೇನು? ಇಲ್ಲಿದೆ ಪೂರ್ಣ ಮಾಹಿತಿ | Trump Tariffs

ಮೋಹನ್​ ಶೆಟ್ಟಿ

Trump Tariffs: ಇದೀಗ ಭಾರತದ ವಿರುದ್ಧವೇ ತಿರುಗಿಬಿದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಿದಲ್ಲದೇ, ದಂಡವನ್ನೂ ಹಾಕಿರುವುದು ಸದ್ಯ ಭಾರತೀಯರನ್ನು ಕೆರಳಿಸಿದೆ.

ಟ್ರಂಪ್​ ಹೇಳಿಕೆ ಏನು?

ಇಷ್ಟಕ್ಕೆ ಮಾತ್ರ ಸುಮ್ಮನಾಗದ ಟ್ರಂಪ್​, ಭಾರತ ಮತ್ತು ರಷ್ಯಾವನ್ನು ಟೀಕಿಸಿದ್ದಾರೆ. “ಭಾರತವು ರಷ್ಯಾದೊಂದಿಗೆ ಯಾವ ರೀತಿಯ ಸಂಬಂಧವನ್ನು ಹೊಂದಿದೆ ಎಂಬುದು ನನಗೆ ಮುಖ್ಯವಲ್ಲ. ಒಟ್ಟಾಗಿ, ಆ ಎರಡು ದೇಶಗಳು ತಮ್ಮ ದುರ್ಬಲ ಆರ್ಥಿಕತೆಯನ್ನು ಇನ್ನಷ್ಟು ಹದಗೆಡಿಸಿಕೊಳ್ಳಬಹುದು. ನಮಗೆ ಭಾರತದೊಂದಿಗೆ ಬಹಳ ಕಡಿಮೆ ವ್ಯಾಪಾರವಿದೆ. ಅವರ ಸುಂಕಗಳು ತುಂಬಾ ಅಧಿಕವಿದೆ. ವಿಶ್ವದಲ್ಲೇ ಅತ್ಯಧಿಕ. ಮತ್ತು ನಮಗೆ ರಷ್ಯಾದೊಂದಿಗೆ ಯಾವುದೇ ವ್ಯಾಪಾರವಿಲ್ಲ. ಈ ಮನೋಭಾವವನ್ನು ಮುಂದುವರಿಸೋಣ” ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದರಿಂದ ಭಾರತಕ್ಕೆ ಹೇಗೆಲ್ಲ ತೊಂದರೆ?

ಪ್ರಸ್ತುತ, ಟ್ರಂಪ್ ವಿಧಿಸಿರುವ ಸುಂಕಗಳು ಭಾರತದ ಹಲವಾರು ವಲಯಗಳ ಮೇಲೆ ಪರಿಣಾಮ ಬೀರಲಿವೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಭಾರತದ ಪ್ರಮುಖ ರಫ್ತುಗಳಲ್ಲಿ ಸ್ಮಾರ್ಟ್‌ಫೋನ್‌, ಔಷಧ, ರತ್ನ, ಜವಳಿ ಮತ್ತು ಕೈಗಾರಿಕಾ ಯಂತ್ರೋಪಕರಣಗಳು ಸೇರಿವೆ. ಆಭರಣ ಮತ್ತು ಪರ್ಲ್​ ಉತ್ಪನ್ನಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತದ ಆಭರಣ ವಲಯವು ಕಳೆದ ವರ್ಷ 10 ಬಿಲಿಯನ್ ಡಾಲರ್​ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ.

ಟ್ರಂಪ್ ಸುಂಕಗಳು ಐಫೋನ್ ಉತ್ಪಾದನೆಯ ಮೇಲೆ ಸದ್ಯ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ. ಟ್ರಂಪ್ ಭಾರತೀಯ ಉತ್ಪನ್ನಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಿದರೂ, ಇದು ಭಾರತವು ಐಫೋನ್ ಉತ್ಪಾದನೆಗೆ ಪ್ರಮುಖ ಕೇಂದ್ರವಾಗುವ ಸಾಮರ್ಥ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ.

ಷೇರುಪೇಟೆಗೆ ಹೊಡೆತ

ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತೀಯ ಉತ್ಪನ್ನಗಳ ಮೇಲೆ ಕಠಿಣ ಸುಂಕ ವಿಧಿಸಿದ ಬೆನ್ನಲ್ಲೇ ರೂಪಾಯಿ ಮೌಲ್ಯವು ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದೆ. ಷೇರು ಸೂಚ್ಯಂಕಗಳು ಕುಸಿದಿವೆ. ಇದು ಭಾರತದ ಬೆಳವಣಿಗೆಯ ಮೇಲೆ ಒತ್ತಡ ಹೇರುತ್ತಲೇ ಇರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಶೇ.25ರಷ್ಟು ಸುಂಕಗಳು 2025-26ರಲ್ಲಿ ಭಾರತದ ಬೆಳವಣಿಗೆಯನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಸಂಸತ್ತಿನಲ್ಲಿ ಪಿಯೂಷ್ ಗೋಯಲ್ ಹೇಳಿದ್ದೇನು?

ಟ್ರಂಪ್ ಸುಂಕ ಸಮರ ಕುರಿತು ಇಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಅಮೆರಿಕ ಅಧ್ಯಕ್ಷರ ಕ್ರಮಗಳ ಪರಿಣಾಮವನ್ನು ಸರ್ಕಾರ ಅಧ್ಯಯನ ಮಾಡುತ್ತಿದೆ ಮತ್ತು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದರು.

"ಏಪ್ರಿಲ್ 2ರಂದು ಟ್ರಂಪ್ ಪರಸ್ಪರ ಸುಂಕಗಳ ಕುರಿತು ಕಾರ್ಯಕಾರಿ ಆದೇಶವನ್ನು ಹೊರಡಿಸಿದರು ಮತ್ತು ಮೂರು ದಿನಗಳ ಬಳಿಕ ಶೇ.10ರಷ್ಟು ಮೂಲ ಸುಂಕ ಜಾರಿಗೆ ಬಂದಿತು. ಮೂಲ ಸುಂಕದ ಜೊತೆಗೆ ಭಾರತದ ಮೇಲಿನ ಹೆಚ್ಚುವರಿ ಸುಂಕವನ್ನು ಶೇ.26ಕ್ಕೆ ನಿಗದಿಪಡಿಸಲಾಗಿದೆ. ಸುಂಕಗಳನ್ನು ಆರಂಭದಲ್ಲಿ 90 ದಿನಗಳವರೆಗೆ ಸ್ಥಗಿತಗೊಳಿಸಿ ನಂತರ ಆಗಸ್ಟ್ 1ರವರೆಗೆ ವಿಸ್ತರಿಸಲಾಯಿತು" ಎಂದು ಹೇಳಿದರು.

"ಭಾರತ ಮತ್ತು ಅಮೆರಿಕ ಮಾರ್ಚ್‌ನಲ್ಲಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ಪ್ರಾರಂಭಿಸಿತು. ಮೊದಲ ಹಂತದ ಮಾತುಕತೆಗಳು ಅಕ್ಟೋಬರ್-ನವೆಂಬರ್ 2025ರೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಮೊದಲ ಮುಖಾಮುಖಿ ಸಭೆ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ನಡೆಯಿತು. ನವದೆಹಲಿ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಇನ್ನೂ ನಾಲ್ಕು ಸಭೆಗಳು ನಡೆಯಿತು. ವರ್ಚುವಲ್ ಸಭೆಗಳು ಸಹ ನಡೆದವು" ಎಂದರು.

"ಹಿಂದಿನ ಘಟನೆಗಳ ಪರಿಣಾಮವನ್ನು ಸರ್ಕಾರ ಪರಿಶೀಲಿಸುತ್ತಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ರಫ್ತುದಾರರು ಮತ್ತು ಕೈಗಾರಿಕೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. ರೈತರು, ಕಾರ್ಮಿಕರು, ಉದ್ಯಮಿಗಳು, ರಫ್ತುದಾರರು, ಎಂಎಸ್‌ಎಂಇಗಳು ಮತ್ತು ಇತರ ಕೈಗಾರಿಕೆಗಳ ಕಲ್ಯಾಣವನ್ನು ರಕ್ಷಿಸುವುದು ಮತ್ತು ಉತ್ತೇಜಿಸುವುದು ಸರ್ಕಾರದ ಆದ್ಯತೆಯಾಗಿದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಲು ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ದೇಶವಾಗಲಿದೆ" ಎಂದರು,(ಏಜೆನ್ಸೀಸ್).