ನ್ಯೂಸ್

ಉತ್ತರ ಕೊರಿಯಾದಲ್ಲಿ ಕಿಮ್​ ಜಾಂಗ್​ ಅನ್​ ಸಹೋದರಿ ಆಡಳಿತ ಹೇಗಿರುತ್ತೆ? ತಜ್ಞರ ವಿಶ್ಲೇಷಣೆ ಹೀಗಿದೆ...!

ನವದೆಹಲಿ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಅನ್​ ನಿಧನದ ಸುದ್ದಿ ಇನ್ನೂ ಖಚಿತ ಪಟ್ಟಿಲ್ಲ. ಆದರೆ, ಆತನ ನಂತರದ ಸ್ಥಾನದಲ್ಲಿರುವ ಸಹೋದರಿ ಕಿಮ್​ ಯೋ ಜಾಂಗ್​ ಆಡಳಿತ ಹೇಗಿರಬಹುದು ಎಂಬ ಚರ್ಚೆ ವಿಶ್ವದೆಲ್ಲೆಡೆ ಈಗಾಗಲೇ ಶುರುವಾಗಿದೆ.

ಕಿಮ್​ ಜಾಂಗ್​ ಅನ್​ ಆರೋಗ್ಯ ಸಂಪೂರ್ಣ ಬಿಗಡಾಯಿಸಿದ್ದು, ಕೋಮಾಗೆ ಜಾರಿದ್ದಾನೆ. ಈ ಕಾರಣಕ್ಕೆ ಜಾಗತಿಕ ತಜ್ಞರು ಉತ್ತರ ಕೊರಿಯಾದ ಭವಿಷ್ಯವೇನು ಎಂದು ಚರ್ಚೆ ನಡೆಸಿದ್ದಾರೆ. ಜತೆಗೆ, ಇಲ್ಲಿ ಆಳ್ವಿಕೆ ಬದಲಾಗುವುದೆಂದರೆ ಜಗತ್ತು ಅದನ್ನು ಹೇಗೆ ಅರ್ಥೈಸಬೇಕು ಎಂದೆಲ್ಲ ವಿಶ್ಲೇಷಿಸಲಾಗುತ್ತಿದೆ. ಕಿಮ್​ ತನ್ನ ಸಹೋದರಿಗೆ ಅಧಿಕಾರ ಹಸ್ತಾಂತರಿಸಿದ್ದಾನೆ ಎಂದು ಹೇಳಲಾಗುತ್ತಿರುವುದು ಕೂಡ ಕಳವಳಕ್ಕೆ ಕಾರಣವಾಗಿದೆ.

ಕುಟುಂಬದ ಹಿನ್ನೆಲೆ ಹಾಗೂ ಈವರೆಗಿನ ಇತಿಹಾಸವನ್ನು ಗಮನಿಸುವುದಾದರೆ ಈಕೆಯೂ ಕೂಡ ದಬ್ಬಾಳಿಕೆಯ ಸರ್ವಾಧಿಕಾರವನ್ನೇ ನಡೆಸಲಿದ್ದಾಳೆ ಎನ್ನುತ್ತಾರೆ ಅಮೆರಿಕದ ನಿವೃತ್ತ ಸೇನಾಧಿಕಾರಿ ಕರ್ನಲ್​ ಡೇವಿಡ್​ ಮ್ಯಾಕ್ಸ್​ವೆಲ್​.

ಉತ್ತರ ಕೊರಿಯಾದ ಉತ್ತರಾಧಿಕಾರಿ ಮಹಿಳೆಯಾಗಿದ್ದರೂ, ಆಡಳಿತ ಸ್ವರೂಪವನ್ನು ಗಮಿಸಿದರೆ, ಆಕೆ ಆರಂಭದ ಕೆಲ ವರ್ಷಗಳ ಕಾಲವಾದರೂ ನಿಷ್ಕರುಣಿಯಾಗಬೇಕಾಗುತ್ತದೆ ಎಂದು ವಿಶ್ಲೇಷಿಸುತ್ತಾರೆ ಅಮೆರಿಕದ ಟಫ್ಟ್ಸ್​ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಂಗ್​ ಯೂನ್​ ಲೀ.

ಅಲ್ಲಿನ ಈವರೆಗಿನ ಆಳ್ವಿಕೆಯಲ್ಲಿ ಅತ್ಯಂತ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಜತೆಗೆ, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠೋರವಾಗಿ ನಡೆಸಿಕೊಂಡ ಉದಾಹರಣೆಗಳಿವೆ.

ಈ ನಡುವೆ ಕಿಮ್​ ಜಾಂಗ್​ ಅನ್​ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಕಿಮ್​ ಮೃತಪಟ್ಟಿದ್ದಾನೆ. ಆದರೆ, ನೀವು ಪ್ರಸ್ತುತ ಉತ್ತರ ಕೊರಿಯಾದಲ್ಲಿದ್ದರೂ ಅದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎನ್ನುವುದು ಕೂಡ ಸತ್ಯ ಎಂದು ಬಿಬಿಸಿಯ ಮಾಜಿ ಪತ್ರಕರ್ತ ಹೇಳಿದ್ದಾನೆ.  ಆದರೆ, ಇನ್ನೊಂದು ಮೂಲದ ಪ್ರಕಾರ, ಕಿಮ್​ ಕೋಮಾಗೆ ಜಾರಿರುವುದು ಹಾಗೂ ಸಾವಿನ ಸಂಗತಿ ಎರಡೂ ಸುಳ್ಳಾಗಿರಬಹುದು ಎಂದೇ ಹೇಳಲಾಗುತ್ತಿದೆ.