ಬೆಂಗಳೂರು: ಪಿಂಕ್ ವಾಟ್ಸ್‌ಆ್ಯಪ್ ಕುರಿತ ಸಂದೇಶವನ್ನು ಒತ್ತಿದವರು ತಾವಿರುವ ಗ್ರೂಪ್‌ಗಳಲ್ಲಿ ಇತರರಿಂದ ಬೈಯಿಸಿಕೊಂಡು ಮುಜುಗರಕ್ಕೆ ಒಳಗಾಗುತ್ತಿರುವ ಪ್ರಸಂಗಗಳು ಕಳೆದೆರಡು ದಿನಗಳಿಂದ ನಿರಂತರವಾಗಿ ನಡೆಯುತ್ತಿವೆ. ತಿಳಿಯದೇ ಆ ಸಂದೇಶ ಒತ್ತಿದವರು ಈಗ ಅದರಿಂದ ಹೇಗೆ ಹೊರಬರುವುದೆಂದು ಚಿಂತೆಗೀಡಾಗಿದ್ದಾರೆ.
ಪಿಂಕ್ ವಾಟ್ಸ್‌ಆ್ಯಪ್ ನ್ಯೂ ವರ್ಶನ್ ಹೆಸರಿನಲ್ಲಿ ಬರುವ ಈ ಲಿಂಕ್ ಅನ್ನು ಒತ್ತುತ್ತಿದ್ದಂತೆಯೇ ಗ್ರೂಪ್‌ಗಳಲ್ಲಿ ಸಾಲು ಸಾಲಾಗಿ ಅದೇ ಸಂದೇಶಗಳು ಫಾರ್ವರ್ಡ್ ಆಗುತ್ತಿರುವುದು ಬಹಳಷ್ಟು ಜನರಿಗೆ ದೊಡ್ಡ ತಲೆನೋವು ತಂದಿದೆ. ಲಿಂಕ್ ಒತ್ತಿದವರ ಫೋನ್‌ನಲ್ಲಿ ಸೇವ್ ಆಗುವ ಆ ಪಿಂಕ್ ವಾಟ್ಸ್‌ಆ್ಯಪ್ ನಂತರ ಪದೇಪದೇ ಅವರಿರುವ ಗ್ರೂಪ್‌ಗಳಿಗೆ ತನ್ನಿಂತಾನೇ ಮೆಸೇಜ್ ಕಳಿಸುತ್ತದೆ. ಒಮ್ಮೆ ಎಲ್ಲರಿಂದ ಬೈಸಿಕೊಂಡವರ ನಂಬರ್‌ನಿಂದಲೇ ಮತ್ತೆ ಅದೇ ಮೆಸೇಜ್ ಫಾರ್ವರ್ಡ್ ಆಗುವುದರಿಂದ ಮತ್ತೆ ಮತ್ತೆ ಬೈಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.
ಹಾಗಾಗಿ ಈ ‘ಚಕ್ರವ್ಯೂಹ’ದಿಂದ ಹೊರಬರುವುದು ಹೇಗೆ ಎಂದು ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ. ಮೊಬೈಲ್ ರಿಸ್ಟಾರ್ಟ್ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ಕೊನೆಗೂ ಕೆಲವರು ಕಂಡುಹಿಡಿದಿದ್ದಾರೆ. ಸೆಟಿಂಗ್ಸ್‌ನಲ್ಲಿ ಡೌನ್‌ಲೋಡೆಡ್ ಆ್ಯಪ್ಸ್‌ಗೆ ಹೋಗಿ ಈ ಹೊಸ ಆ್ಯಪ್ ಡೌನ್‌ಲೋಡ್ ಆಗಿರುವುದನ್ನು ಡಿಲೀಟ್ ಮಾಡಬೇಕು. ಮೆಮರಿಯಿಂದಲೂ ಅದನ್ನು ತೆಗೆದುಹಾಕಬೇಕು. ನಂತರ ಮೊಬೈಲ್ ರಿಸ್ಟಾರ್ಟ್ ಮಾಡಿದರೆ ಆಗ ಪಿಂಕ್ ವಾಟ್ಸ್‌ಆ್ಯಪ್ ಕಾಟ ಇರುವುದಿಲ್ಲ. ಕೆಲವರು ಅದನ್ನು ಹೇಗೆ ತೆಗೆದುಹಾಕಬೇಕೆಂಬುದನ್ನು ವಿವರಿಸುವ ವಿಡಿಯೋ ಕೂಡ ಮಾಡಿ ಯೂಟ್ಯೂಬ್‌ನಲ್ಲಿ ಹರಿಬಿಟ್ಟಿದ್ದಾರೆ.