ಯೋವಾ ಏತಾಂ ಏವಂ ವೇದ ಅಪಹತ್ಯ ಪಾಪ್ಮಾನಂ ಅನಂತೇ
ಸ್ವರ್ಗೆ ಲೋಕೇ ಜ್ಯೇಯೇ ಪ್ರತಿತಿಷ್ಠತಿ, ಪ್ರತಿತಿಷ್ಠತಿ || (4-9)
ಐತರೇಯೋಪನಿಷತ್ತಿನಲ್ಲಿ ವಾಮದೇವ ಋಷಿಯು ಬ್ರಹ್ಮಜ್ಞಾನವನ್ನು ಪ್ರಶಂಶಿಸಿ ಅದರ ಫಲವನ್ನು ಹೇಳುವಾಗ, ‘‘ಹೀಗೆ ತಿಳಿದ ಅವರು ಶರೀರಪಾತಾನಂತರ ಮೇಲಿನ ಗತಿಗೇರಿ ಆ ಸ್ವರ್ಗಲೋಕದಲ್ಲಿ ಸಕಲ ಕಾಮಗಳನ್ನು ಹೊಂದಿ ಅಮೃತರಾದರು, ಅಮೃತರಾದರು’’ ಎಂದು ಹೇಳಿದೆ. ಇಲ್ಲೂ ಸ್ವರ್ಗವು ಸ್ಪಷ್ಟವಾಗಿಯೇ ಪರಮಪದವೆಂಬ ಅರ್ಥದಲ್ಲಿ ಬಂದಿರುವುದನ್ನು ಸಕಲ ಆಚಾರ್ಯರೂ ಒಪ್ಪಿದ್ದಾರೆ.
‘‘ಸ ಏವಂ ವಿದ್ವಾನ್ ಅಸ್ಮಚ್ಛರೀರಭೇದಾದೂರ್ಧ್ವಂ
ಉತ್ಕೃಮ್ಯ ಅಮುಷ್ಮಿನ್ |
ಸ್ವರ್ಗೆ ಲೋಕೇ ಸರ್ವಾನ್ ಕಾಮನಾಪ್ತಾ್ವಧಿಮೃತಃ
ಸಮಭವತ್ ಸಮಭವತ್ || (2-4ರಲ್ಲೂ ಹೀಗೆ ಬಂದಿದೆ.)
ಛಾಂದೋಗ್ಯ ಉಪನಿಷತ್ತಿನಲ್ಲಿ (8-4-5) ಖಂಡಗಳಲ್ಲಿ)
ಈ ಪರಮಪದವನ್ನೇ ‘‘ಬ್ರಹ್ಮಲೋಕ’’ವೆಂದು ವರ್ಣಿಸಿದೆ. ‘‘ಅಪಹತಪಾಪ್ಮಾಹ್ಯೇಷ ಬ್ರಹ್ಮಲೋಕಃ.’’ ಇದು ಪೃಥ್ವಿಯಿಂದ ‘‘ಮೂರನೆಯ’’ ಲೋಕವೆಂದೂ ಅಲ್ಲಿ ‘‘ಅರ’’, ‘‘ಣ್ಯ’’ಗಳೆಂಬ ಸರೋವರಗಳಿವೆಯೆಂದೂ, ‘‘ಐರಂಮದೀಯ’’ವೆಂಬ ಸರಸ್ಸು ಇದೆಯೆಂದೂ, ‘‘ಸೋಮಸವನ’’ವೆಂಬ ಅಶ್ವತ್ಥವಿದೆಯೆಂದೂ ಭಗವಂತನ ನಿತ್ಯವಾಸ ಭೂಮಿಯಾದ ‘‘ಅಪರಾಜಿತಾ’’ ಎಂಬ ಪುರವಿದೆಯೆಂದೂ, ಹಿರಣ್ಮಯವಾದ ‘‘ಮಂಡಪ’’ವಿದೆಯೆಂದೂ ವರ್ಣಿಸಲಾಗಿದೆ. ಬ್ರಹ್ಮಚರ್ಯಾದಿ ವ್ರತನಿಷ್ಠರು ಮಾತ್ರ ಹೊಂದುವರೆಂದು ಪದೇಪದೆ ವರ್ಣಿಸಲಾಗಿರುವ ಈ ಲೋಕವು ಕೇವಲ ‘‘ಚತುಮುಖ’’ ಲೋಕವಲ್ಲವೆಂಬುದು ಸ್ಪಷ್ಟ. ಇದಕ್ಕೆ ಮೇಲ್ಪಟ್ಟ ಲೋಕವನ್ನು ಶ್ರುತಿಯು ಎಲ್ಲೂ ವರ್ಣಿಸಿಲ್ಲ.
ಕೌಷಿತಕೀ ಉಪನಿಷತ್ತಿನಲ್ಲೂ ಇದೇ ವರ್ಣನೆ ಇದೆ. (1-21-67) ದೇವಯಾನಗಾಮಿಗಳು ಹೋಗಿ ಸೇರುವ ಕೊನೆಯ ಲೋಕವೇ ‘‘ಬ್ರಹ್ಮಲೋಕ.’’ ಮೇಲಿನಂತೆ, ಸರೋವರ, ವೃಕ್ಷ, ಮಂಡಪಗಳ ವರ್ಣನೆ ಇಲ್ಲೂ ಇದೆ. ಬ್ರಹ್ಮಪುರವನ್ನು ‘‘ಅಪರಾಜಿತ’’ ಎಂದೇ ವರ್ಣಿಸಿ, ಜೀವಾತ್ಮನು ಪರಮಾತ್ಮನ ‘‘ಪರ್ಯಂಕ’’ವನ್ನು ಸೇರುವವರೆಗೆ ನಡೆಯುವ ದಿವ್ಯ ವ್ಯಾಪಾರವನ್ನು, ‘‘ಪರ್ಯಂಕವಿದ್ಯೆ’’ ಎಂದು ಪ್ರಸಿದ್ಧವಾಗಿ ಬ್ರಹ್ಮಸೂತ್ರಜ್ಞರಾದ ವೇದಾಂತಿಗಳು ಆಸ್ವಾದಿಸುವಂತೆ, ವರ್ಣಿಸಲಾಗಿದೆ.
ಮುಂಡಕೋಪನಿಷತ್ತಿನಲ್ಲಿ (1-2-6) ಅರ್ಚಿರಾದಿ ಮಾರ್ಗದ ಕೊನೆಯ ಸ್ಥಾನವನ್ನು ‘‘ಏಷ ವಃ ಪುಣ್ಯಃ ಸುಕೃತೋ ಬ್ರಹ್ಮಲೋಕಃ’’ ಎಂದೂ ವರ್ಣಿಸಿದೆ. ಇಲ್ಲಿ ‘‘ಅಮೃತಮಯನಾದ ಪರಮಪುರುಷನು ವಾಸಿಸುವನು’’ ಎಂದೂ (1-2-11) ಹೇಳಿರುವುದರಿಂದ ಇದು ಪರಮಪದವೆಂಬುದು ಸ್ಪಷ್ಟ.
‘‘ಯಸ್ಸರ್ವಜ್ಞಃ ಸರ್ವವಿತ್ ಯಸ್ಮೆ ೖಷ ಮಹಿಮಾ ಭುವಿ | ದಿವ್ಯೇ ಬ್ರಹ್ಮಪುರೇ ಹ್ಯೇವ ವ್ಯೋಮ್ನಾ ್ಯ್ಮಾ ಪ್ರತಿಷ್ಠಿತಃ ||’’ (2-2-7) ಎಂಬಲ್ಲಿ ಸರ್ವಜ್ಞನಾದ ಭಗವಂತನು ದಿವ್ಯವಾದ ಬ್ರಹ್ಮಪುರದಲ್ಲಿ ಪ್ರತಿಷ್ಠಿತನಾಗಿರುವನೆಂದೂ ಹೇಳಿದೆ. (3-2-1ರಲ್ಲಿ ‘‘ಪರಮಂಬ್ರಹ್ಮಧಾಮ’’ವೆಂದೂ, 3-2-4ರಲ್ಲಿ ‘‘ಬ್ರಹ್ಮಧಾಮ’’ವೆಂದೂ, 3-2-6ರಲ್ಲಿ ‘‘ಬ್ರಹ್ಮಲೋಕ’’ವೆಂದೂ ವರ್ಣಿಸಿದೆ.)
ಪ್ರಶ್ನೋಪನಿಷತ್ತಿನಲ್ಲೂ (1-15) ‘‘ಬ್ರಹ್ಮಲೋಕ’’ವೆಂದು ಕರೆದು, 5-5ರಲ್ಲಿ - ಎಲ್ಲ ಲೋಕಗಳಿಗೂ ಮೇಲಾದ ‘‘ಬ್ರಹ್ಮಲೋಕದಲ್ಲಿ’’ ಪರಾತ್ಪರನಾದ ಭಗವಂತನು ‘‘ಪುರಿಶಯ’’ನಾಗಿ (ಶ್ರೀ ರಂಗನಾಥನಂತೆ) ಮಲಗಿರುವುದನ್ನು ವರ್ಣಿಸಿದೆ. ಹೀಗೆ ಪರಮಪದವು ‘‘ಸ್ವರ್ಗ’’ ‘‘ಬ್ರಹ್ಮಲೋಕ’’ ಮುಂತಾಗಿಯೂ ಪ್ರಸಿದ್ಧವಾಗಿಯೇ ಇದೆ.