ನ್ಯೂಸ್

ಸಖತ್​ ಟೇಸ್ಟಿಯಾದ ಚಿಕನ್​ ಪೆಪ್ಪರ್​ ಫ್ರೈ ಮಾಡೋದು ಹೇಗೆ? ಈ ರೀತಿ ಒಮ್ಮೆ ಟ್ರೈ ಮಾಡಿ ನೋಡಿ... Chicken Pepper Fry

Chicken Pepper Fry : ಸಾಮಾನ್ಯವಾಗಿ ರಜೆಯ ದಿನಗಳಲ್ಲಿ ಎಲ್ಲರೂ ರುಚಿಕರವಾದ ಊಟ ಮಾಡಿದ ಬಳಿಕ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಅದರಲ್ಲೂ ಮಾಂಸಾಹಾರಿಗಳಿಗೆ ಚಿಕನ್ ತುಂಬಾ ಅಚ್ಚುಮೆಚ್ಚು. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೆಚ್ಚಿನ ಜನರು ಚಿಕನ್ ತಿನ್ನಲು ಇಷ್ಟಪಡುತ್ತಾರೆ.

ಭಾನುವಾರ ಅಥವಾ ಇನ್ಯಾವುದೇ ವಿಶೇಷ ದಿನ ಬರಲಿ ರುಚಿಕರವಾದ ಚಿಕನ್​ ಖಾದ್ಯ ಮಾಡಲು ಬಯಸುತ್ತಾರೆ. ಅದರಲ್ಲೂ ಒಂದೇ ರೀತಿಯ ಚಿಕನ್​ ಖಾದ್ಯ ತಿಂದು ತಿಂದು ಬೋರ್​ ಆದ ಮಂದಿ ಹೊಸ ರೀತಿಯ ಚಿಕನ್​ ರೆಸಿಪಿ ಟ್ರೈ ಮಾಡುತ್ತಾರೆ. ಹೈದರಾಬಾದಿ ಚಿಕನ್​ ರೆಸಿಪಿ, ಆಂಬೂರ್​ ಬಿರಿಯಾನಿ, ಕೊಲ್ಲಾಪುರಿ ಚಿಕನ್​ ಕರಿ ಹೀಗೆ ನಾನಾ ರೀತಿಯ ಚಿಕನ್​ ರೆಸಿಪಿಗಳಿವೆ. ಯೂಟ್ಯೂಬ್​ ಸೇರಿದಂತೆ ಅನೇಕ ಜಾಲತಾಣಗಳಲ್ಲಿ ಅಡುಗೆ ಕುರಿತು ಲಭ್ಯವಿರುವ ಅನೇಕ ವಿಡಿಯೋ ಹಾಗೂ ಪೋಸ್ಟ್​ಗಳನ್ನು ನೋಡಿ ಚಿಕನ್​ ರೆಸಿಪಿ ಟ್ರೈ ಮಾಡಿದ ಅನೇಕ ಮಂದಿಯನ್ನು ನಾವು ನೋಡಿದ್ದೇವೆ. ನೀವು ಕೂಡ ಟ್ರೈ ಮಾಡುತ್ತೀರಿ.

ಒಂದೇ ರೀತಿ ತಿಂದು ತಿಂದು ಬೋರ್​ ಆಗಿದ್ದು, ಹೊಸದಾಗಿ ಏನಾದರೂ ಟ್ರೈ ಮಾಡಬೇಕು ಅಂದುಕೊಂಡಿದ್ರೆ ನೀವು ಚಿಕನ್​ ಪೆಪ್ಪರ್​ ಫ್ರೈ ಅನ್ನು ಒಮ್ಮೆ ಮಾಡಿ ನೋಡಿ. ಈ ಚಿಕನ್ ಪೆಪ್ಪರ್ ಫ್ರೈ ಅನ್ನ, ದೋಸೆ, ಇಡ್ಲಿ, ಚಪಾತಿ ಮತ್ತು ಎಲ್ಲದರ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಮತ್ತು ಸಖತ್​ ಟೇಸ್ಟಿಯಾಗಿರುತ್ತದೆ. ಹಾಗಾದರೆ, ಸಖತ್​ ಟೇಸ್ಟಿಯಾಗಿ ಚಿಕನ್ ಪೆಪ್ಪರ್ ಫ್ರೈ ಮಾಡುವುದು ಹೇಗೆಂದು ನಾವೀಗ ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿಗಳೇನು?

* ಮೆಣಸು - 2 ಚಮಚ

* ಜೀರಿಗೆ - 1 ಚಮಚ

* ಸೋಂಪು - 1 ಚಮಚ

* ಎಣ್ಣೆ - 3 ಚಮಚ

* ಚಕ್ಕೆ - 1

* ಲವಂಗ - 3

* ಒಣ ಮೆಣಸಿನಕಾಯಿ - 3

* ಬೆಳ್ಳುಳ್ಳಿ - 5 ಎಸಳು

* ಶುಂಠಿ - 1 ತುಂಡು

* ಈರುಳ್ಳಿ - 2

* ಉಪ್ಪು - ಅಗತ್ಯಕ್ಕೆ ತಕ್ಕಷ್ಟು

* ಅರಿಶಿನ ಪುಡಿ - ½ ಚಮಚ

* ಹಸಿಮೆಣಸಿನಕಾಯಿ - 3

* ಕೋಳಿ ಮಾಂಸ - ½ ಕೆಜಿ

* ಕರಿಬೇವು - 1 ಚಿಕ್ಕ ಕಟ್ಟು

ಪಾಕವಿಧಾನ

ಮೊದಲು ಮೆಣಸು, ಜೀರಿಗೆ ಮತ್ತು ಸೋಂಪನ್ನು ಮಿಕ್ಸರ್ ಜಾರ್‌ನಲ್ಲಿ ರುಬ್ಬಿಕೊಳ್ಳಿ. ನಂತರ, ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕೊತ್ತಂಬರಿ ಸೊಪ್ಪು, ಚಕ್ಕೆ, ಲವಂಗ, ಒಣ ಮೆಣಸಿನಕಾಯಿ, ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಿರಿ. ಬಳಿಕ ಕತ್ತರಿಸಿದ ಈರುಳ್ಳಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಗೋಲ್ಡನ್ ಬ್ರೌನ್ ರವರೆಗೆ ಫ್ರೈ ಮಾಡಿ. ಇದಾದ ನಂತರ ಅರಿಶಿನ ಪುಡಿ, ಹಸಿರು ಮೆಣಸಿನಕಾಯಿ ಮತ್ತು ಚಿಕನ್ ಸೇರಿಸಿ ಚೆನ್ನಾಗಿ ಹುರಿಯಿರಿ. ಬಳಿಕ ರುಬ್ಬಿದ ಮಸಾಲೆ ಸೇರಿಸಿ ಮತ್ತು ಬೆರೆಸಿ. ಚಿಕನ್ ಚೆನ್ನಾಗಿ ಬೆಂದ ನಂತರ, ಅಂತಿಮವಾಗಿ ಕರಿಬೇವು ಎಲೆಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಹೀಗೆ ಮಾಡಿದರೆ, ನಿಮ್ಮ ರುಚಿಕರವಾದ ಚಿಕನ್ ಪೆಪ್ಪರ್ ಫ್ರೈ ಸವಿಯಲು ಸಿದ್ಧ.