Smart Phone : ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಕಳವು ಮಾಡಿ, ನಂತರ ಅವರ ಬ್ಯಾಂಕ್ ಖಾತೆಯಿಂದ ಒಟ್ಟು ರೂ. 1.95 ಲಕ್ಷಕ್ಕೂ ಹೆಚ್ಚು ಹಣ ಎಗರಿಸಿದ ಆರೋಪದ ಮೇಲೆ ಮೂವರು ಸೈಬರ್ ಖದೀಮರನ್ನು ಹೈದರಬಾದ್ನ ಸೈಬರ್ ಕ್ರೈಂ ಘಟಕ ಬಂಧನ ಮಾಡಿದೆ.
ಬಂಧಿತರನ್ನು ಆಟೋ ಚಾಲಕ ಮೊಹಮ್ಮದ್ ಮೊಯಿನ್ ಉದ್ದೀನ್ (31), ಕಾರು ಚಾಲಕ ಮೊಹಮ್ಮದ್ ಸೈಯದ್ ಅಲ್ಮಾನ್ ಅಲಿಯಾಸ್ ಸುಲ್ತಾನ್ (21) ಹಾಗೂ ತರಕಾರಿ ವ್ಯಾಪಾರಿ ಮೊಹಮ್ಮದ್ ಹುಸೇನ್ (32) ಎಂದು ಗುರುತಿಸಲಾಗಿದೆ.
ಹಿರಿಯ ನಾಗರಿಕರೊಬ್ಬರು ಸೈಬರ್ ಕ್ರೈಂ ಘಟಕದಲ್ಲಿ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 17ರಂದು ಉಪ್ಪಲ್ನಿಂದ ತಾರ್ನಕಾಕ್ಕೆ ಶೇರ್ ಆಟೋದಲ್ಲಿ ಪ್ರಯಾಣಿಸುವಾಗ ತನ್ನ ಫೋನ್ ಕಳೆದುಕೊಂಡಿದ್ದರು. ಇದಾದ ಮಾರನೇ ದಿನವೇ ತನ್ನ ಸಿಮ್ ಕಾರ್ಡ್ ಅನ್ನು ಬ್ಲಾಕ್ ಮಾಡಿ, ಬೇರೆ ಹೊಸ ಸಿಮ್ ಖರೀದಿ ಮಾಡಿದರು. ಆದರೆ, ಸೆ. 20 ರಂದು ತನ್ನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆಯಿಂದ 1,95,001 ರೂಪಾಯಿ ಡೆಬಿಟ್ ಅಥವಾ ಕಡಿತವಾಗಿರುವುದು ಅವರ ಗಮನಕ್ಕೆ ಬಂದಿತು. ತಕ್ಷಣ ಎಚ್ಚೆತ್ತುಕೊಂಡ ಸಂತ್ರಸ್ತ ದೂರು ದಾಖಲಿಸಿದರು. ಐಟಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಿಸಲಾಗಿದ್ದು, ಪೊಲೀಸರು ನಡೆಸಿದ ತನಿಖೆಯಲ್ಲಿ ಮೂವರು ಆರೋಪಿಗಳು ಪೂರ್ವನಿಯೋಜಿತವಾಗಿ ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ.
ಮೊದಲೇ ಪ್ಲಾನ್ ಮಾಡಿದ್ದ ಖತರ್ನಾಕ್ ಗ್ಯಾಂಗ್, ತಮ್ಮ ಸಂಚಿನ ಭಾಗವಾಗಿ ಮೊಹಮ್ಮದ್ ಮೊಯಿನ್ ಉದ್ದೀನ್ ಉಪ್ಪಲ್ ಬಳಿ ದೂರುದಾರರನ್ನು ತನ್ನ ಆಟೋದಲ್ಲಿ ಹತ್ತಿಸಿಕೊಂಡನು. ಬಳಿಕ ಇನ್ನೊಬ್ಬ ಆರೋಪಿ ಸೈಯದ್ ಜತೆಗೂಡಿ ಫೋನ್ ಪೇ ಮೂಲಕ ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಹೆದರಿದ ದೂರುದಾರ ಅವರ ಮುಂದೆ ತನ್ನ ಫೋನ್ ಅನ್ ಲಾಕ್ ಮಾಡಿದ್ದಾನೆ. ಹಣ ವರ್ಗಾವಣೆ ಆಗುತ್ತಿಂದತೆಯೇ ಸಲ್ಮಾನ್ ದೂರುದಾರನ ಗಮನವನ್ನು ಬೇರೆಡೆಗೆ ತಿರುಗಿಸಿದ್ದಾನೆ. ಈ ವೇಳೆ ಉದ್ದೀನ್, ಫೋನ್ ಕಳ್ಳತನ ಮಾಡಿದ್ದಾನೆ. ಇದಾದ ಬಳಿಕ ಇಬ್ಬರು ಸಂತ್ರಸ್ತನನ್ನು ಆಟೋದಿಂದ ಕೆಳಗೆ ಇಳಿಸಿದ್ದಾರೆ.
ಇದಾದ ಬಳಿಕ ಉದ್ದೀನ್ ಮತ್ತು ಸಲ್ಮಾನ್ ಮೆಡಚಲ್-ಮಲ್ಕಜ್ಗಿರಿ ವ್ಯಾಪ್ತಿಗೆ ತೆರಳಿ, ದೂರುದಾರನ ಖಾತೆಯಿಂದ ಅನಧಿಕೃತವಾಗಿ ಹಣ ವರ್ಗಾಯಿಸಲು ಆರಂಭಿಸಿದ್ದಾರೆ. ಫೋನ್ ಪೇ ಬಳಸಿಕೊಂಡು ಪೆಟ್ರೋಲ್ ಬಂಕ್ ಮತ್ತು ವಿವಿಧ ಅಂಗಡಿಗಳಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಹಣವನ್ನು ನಗದಾಗಿ ವಶಪಡಿಸಿಕೊಂಡಿದ್ದಾರೆ. ನಂತರ ಸೆಪ್ಟೆಂಬರ್ 20ರಂದು ಮೂವರು ಆರೋಪಿಗಳು ಸೇರಿ, ಕದ್ದ ಹಣದಿಂದ 90,000 ರೂ. ಹಣವನ್ನು ವಿವಿಧ ವಹಿವಾಟುಗಳ ಮೂಲಕ ಗೇಮಿಂಗ್ ಪ್ಲಾಟ್ ಫಾರ್ಮ್ಗೆ ಸಂಬಂಧಿಸಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ. ನಂತರ ಹುಸೇನ್ ತನ್ನ ಫೆಡರಲ್ ಬ್ಯಾಂಕ್ ಖಾತೆಯ ಮೂಲಕ ಆ ಮೊತ್ತವನ್ನು ಹಿಂಪಡೆಯುವಲ್ಲಿ ಯಶಸ್ವಿಯಾದನು. ಒಟ್ಟು 1,95,000 ರೂಪಾಯಿ ಹಣವನ್ನು ದೂಚಿದ್ದು, ಆ ಹಣವನ್ನು ಮೂವರು ಸಮನಾಗಿ ಹಂಚಿಕೊಂಡಿದ್ದಾರೆ.
ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಈ ಘಟನೆಯಿಂದ ಹೈದರಬಾದ್ ಸೈಬರ್ ಕ್ರೈಂ ಡಿಸಿಪಿ ಸಾರ್ವಜನಿಕರಿಗೆ ಎಚ್ಚರಿಕಾ ಪ್ರಕಟಣೆ ಹೊರಡಿಸಿದ್ದಾರೆ. ವಿಶೇಷವಾಗಿ ಪಬ್ಲಿಕ್ ಸಾರಿಗೆ ಹಾಗೂ ಡಿಜಿಟಲ್ ಪಾವತಿ ಸೇವೆಗಳನ್ನು ಬಳಸುವಾಗ ಅತಿಯಾದ ಜಾಗ್ರತೆ ವಹಿಸಲು ಕೋರಿದ್ದಾರೆ. ಅದರಲ್ಲೂ ಆಟೋ ಹತ್ತುವ ಮೊದಲು ವಾಹನದ ಸಂಖ್ಯೆ, ಬಣ್ಣ ಮತ್ತು ಚಾಲಕರ ವಿವಿರಗಳನ್ನು ತಪ್ಪದೇ ಗಮನಿಸಬೇಕು. ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಆ ವಾಹನಕ್ಕೆ ಏರಲೇಬಾರದು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)