Rahul Gandhi : ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಡಿದ ಟೀಕೆಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ (ಜುಲೈ 04) ತಡೆ ನೀಡಿದೆ. ಆದರೂ, ರಾಹುಲ್ ವಿರುದ್ಧ ಉನ್ನತ ನ್ಯಾಯಾಲಯ ಟೀಕಾ ಪ್ರಹಾರ ನಡೆಸಿದೆ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ.ಜಿ. ಮಸಿಹ್ ಅವರ ಪೀಠವು, 2020ರ ಜೂನ್ ತಿಂಗಳಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಹಿಂಸಾತ್ಮಕ ಘರ್ಷಣೆಯ ಕುರಿತು ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
2,000 ಚದರ ಕಿ.ಮೀ. ಭಾರತೀಯ ಪ್ರದೇಶವನ್ನು ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅಲ್ಲದೆ, ಚೀನಾಗೆ ಶರಣಾಗಿದ್ದಾರೆ ಎಂದು ನರೇಂದ್ರ ಮೋದಿ ಸರ್ಕಾರವನ್ನು ದೂಷಿಸಿದ್ದರು. ಈ ಸಂಬಂಧ ದಾಖಲಾಗಿದ್ದ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸುವಂತೆ ರಾಹುಲ್ ಗಾಂಧಿ ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ ನ್ಯಾಯಾಲಯ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಆದರೂ, ರಾಹುಲ್ ಹೇಳಿಕೆಯನ್ನು ಟೀಕಿಸಿದೆ.
ಭಾರತದ 2,000 ಚದರ ಕಿ.ಮೀ ಭೂಮಿಯನ್ನು ಚೀನಿಯರು ವಶಪಡಿಸಿಕೊಂಡಿದ್ದಾರೆಂದು ನಿಮಗೆ ಹೇಗೆ ತಿಳಿಯಿತು? ನೀವು ನಿಜವಾದ ಭಾರತೀಯರಾಗಿದ್ದರೆ ಇದನ್ನೆಲ್ಲಾ ಹೇಳುವುದಿಲ್ಲ ಎಂದು ನ್ಯಾಯಮೂರ್ತಿ ದತ್ತ ಅವರು ಗಾಂಧಿಯವರ ಹೇಳಿಕೆಗಳನ್ನು ಉಲ್ಲೇಖಿಸಿ, ಖಂಡಿಸಿದರು. ಈ ವೇಳೆ ರಾಹುಲ್ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ರಾಹುಲ್ ಅವರು ಇಂತಹ ವಿಷಯಗಳನ್ನು ಮಾತನಾಡದಿದ್ದರೆ ಅವರು ವಿಪಕ್ಷದ ನಾಯಕರಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಹಾಗಾದರೆ, ನೀವೇಕೆ ಸಂಸತ್ತಿನಲ್ಲಿ ಅಂತಹ ವಿಷಯಗಳನ್ನು ಹೇಳಬಾರದು? ಅದನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಏಕೆ ಪೋಸ್ಟ್ ಮಾಡಬೇಕು ಎಂದು ನ್ಯಾಯಮೂರ್ತಿ ದತ್ತ ಪ್ರಶ್ನೆ ಮಾಡಿದರು.
ಸದ್ಯ ವಿಚಾರಣೆಗೆ ತಡೆ ನೀಡಿರುವ ಸುಪ್ರೀಂಕೋರ್ಟ್, ರದ್ದುಗೊಳಿಸುವಂತೆ ರಾಹುಲ್ ಗಾಂಧಿ ಸಲ್ಲಿಸಿದ ಮನವಿಯ ವಿರುದ್ಧ ನೋಟಿಸ್ ಜಾರಿ ಮಾಡಿದೆ. ಅಂದಹಾಗೆ, ಫೆಬ್ರವರಿಯಲ್ಲಿ ಲಖನೌದಲ್ಲಿ ಚುನಾಯಿತ ಪ್ರತಿನಿಧಿಗಳಿಗಾಗಿ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಅನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಮೇ ತಿಂಗಳಲ್ಲಿ ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು. ಅಲಹಾಬಾದ್ ಹೈಕೋರ್ಟ್ ನ್ಯಾಯಾಮೂರ್ತಿ ಸುಭಾಷ್ ವಿದ್ಯಾರ್ಥಿ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಸೇನೆಯನ್ನು ಕೆಣಕುವ ಹೇಳಿಕೆಗಳನ್ನು ನೀಡುವ ಹಕ್ಕು ಸೇರಿಲ್ಲ ಎಂದು ಉಲ್ಲೇಖಿಸಿದ್ದರು. (ಏಜೆನ್ಸೀಸ್)