ನ್ಯೂಸ್

ಬೈಕ್​ಗೆ ಡಿಕ್ಕಿ ಹೊಡೆದು ಟ್ರಕ್​ ಪರಾರಿ: 36 ಗಂಟೆಯಲ್ಲಿ ಆರೋಪಿ ಪತ್ತೆಹಚ್ಚಿದ AI! ಹೇಗಿತ್ತು ರೋಚಕ ಕಾರ್ಯಾಚರಣೆ? AI Help ​

AI Help : ಇತ್ತೀಚೆಗೆ ನಾಗ್ಪುರದಲ್ಲಿ ಸಂಭವಿಸಿದ ಭೀಕರ ಅಪಘಾತದ ಬಳಿಕ ಸಂತ್ರಸ್ತ ವ್ಯಕ್ತಿಗೆ ಯಾವುದೇ ನಿಖರ ಮಾಹಿತಿ ಗೊತ್ತಿರಲಿಲ್ಲ. ತನ್ನ ಪತ್ನಿಗೆ ಡಿಕ್ಕಿ ಹೊಡೆದ ಟ್ರಕ್ ಮೇಲೆ ಕೇವಲ ಕೆಂಪು ಗುರುತುಗಳಿದ್ದವು ಎಂಬುದಷ್ಟೇ ಆ ವ್ಯಕ್ತಿಗೆ ತಿಳಿದಿತ್ತು. ಆದರೆ, ಟ್ರಕ್​ನ ಗಾತ್ರ, ಬ್ರ್ಯಾಂಡ್ ಮತ್ತು ನಂಬರ್​ ಗುರುತಿಸಲು ಆತನಿಂದ ಸಾಧ್ಯವಾಗಲಿಲ್ಲ. ಇಂತಹ ಕಷ್ಟವಾದ ಪ್ರಕರಣವನ್ನು ಕೃತಕ ಬುದ್ಧಿಮತ್ತೆ ಅಥವಾ AI ಬಳಸಿ ಕೇವಲ 36 ಗಂಟೆಯಲ್ಲಿ ಪೊಲೀಸರು ಬಗೆಹರಿಸಿದ್ದಾರೆ. ಕೇಳಲು ನಿಮಗೆ ಅಚ್ಚರಿ ಎನಿಸಿದರೂ ಇದೇ ಸತ್ಯ.

ಹೌದು, ಆಗಸ್ಟ್ 9 ರಂದು ರಕ್ಷಾ ಬಂಧನ ಆಚರಣೆ ನಡೆಯಿತು. ಆ ದಿನ ಪತಿ ಮತ್ತು ಪತ್ನಿ ನಾಗ್ಪುರದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಒಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮಹಿಳೆ ರಸ್ತೆ ಮೇಲೆ ಬಿದ್ದಳು. ಡಿಕ್ಕಿ ಹೊಡೆದ ಟ್ರಕ್, ಅಲ್ಲಿಂದ ಪರಾರಿಯಾಯಿತು. ಇತ್ತ ಪತಿ, ತನ್ನ ಪತ್ನಿಯ ದೇಹವನ್ನು ತನ್ನ ಬೈಕ್‌ಗೆ ಕಟ್ಟಿಕೊಂಡು ಮಧ್ಯಪ್ರದೇಶದಲ್ಲಿರುವ ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದನು. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ, ಜನರ ಮನಸ್ಸನ್ನು ಸಹ ಕಲಕಿತು.

ಈ ಪ್ರಕರಣದಲ್ಲಿ ಸಂತ್ರಸ್ತನ ಬಳಿ ಬಹಳ ಕಡಿಮೆ ಮಾಹಿತಿ ಇತ್ತು. ಹಿಟ್​ ಅಂಡ್​ ರನ್​ ಮಾಡಿದ ಟ್ರಕ್​ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಸಂತ್ರಸ್ತನ ಬಳಿ ಇರಲಿಲ್ಲ ಎಂದು ನಾಗ್ಪುರ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಹರ್ಷ ಪೊದ್ದಾರ್ ಎನ್​ಡಿಟಿವಿಗೆ ತಿಳಿಸಿದ್ದಾರೆ. ಇಷ್ಟೆಲ್ಲ ಮಾಹಿತಿ ಕೊರತೆ ಇದ್ದರು ಹೇಗೆ ಆರೋಪಿಗಳನ್ನು ಪತ್ತೆಹಚ್ಚಲಾಯಿತು ಎಂದು ಪ್ರಶ್ನೆ ಮಾಡಿದಾಗ, ಸಿಸಿಟಿವಿ ಡೇಟಾವನ್ನು ಸಂಗ್ರಹಿಸಿ, ಕೃತಕ ಬುದ್ಧಿಮತ್ತೆಯ ಅಲ್ಗಾರಿದಮ್‌ಗಳ ಮೂಲಕ ಪತ್ತೆ ಹಚ್ಚಲಾಯಿತು ಎಂದು ತಿಳಿಸಿದ್ದಾರೆ.

ಈ ಪ್ರಕರಣ ತನಿಖೆಯಲ್ಲಿ ಪ್ರಮುಖವಾಗಿ ಮಾಡಿದ ಕೆಲಸ ಏನೆಂದರೆ, ಘಟನೆ ನಡೆದ 15 ರಿಂದ 20 ಕಿ.ಮೀ ದೂರದಲ್ಲಿರುವ ಮೂರು ಪ್ರತ್ಯೇಕ ಟೋಲ್ ನಾಕಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು (ಮೆಟಾಡೇಟಾ ಎಂದು ಕರೆಯುತ್ತಾರೆ) ಸಂಗ್ರಹಿಸಿ, ಎರಡು AI ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ವಿಶ್ಲೇಷಣೆ ಮಾಡಿದೆವು. ಇವೆರಡೂ ಕಂಪ್ಯೂಟರ್ ವಿಷುಯಲ್ ಎಂಬ ತಂತ್ರಜ್ಞಾನವನ್ನು ಆಧರಿಸಿವೆ. ಮೊದಲ ಅಲ್ಗಾರಿದಮ್ ಮಾಡಿದ್ದೇನೆಂದರೆ, ಕೆಂಪು ಗುರುತುಗಳನ್ನು ಹೊಂದಿರುವ ಟ್ರಕ್‌ಗಳನ್ನು ಹೊರತೆಗೆದು ಗುರುತಿಸಲು ಈ ಒಟ್ಟು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿತು. ಎರಡನೆಯ ಅಲ್ಗಾರಿದಮ್​, ಎಲ್ಲ ಟ್ರಕ್‌ಗಳ ಸರಾಸರಿ ವೇಗವನ್ನು ವಿಶ್ಲೇಷಿಸಿ, ಯಾವ ಟ್ರಕ್ ಇದರಲ್ಲಿ ಭಾಗಿಯಾಗಿರಬಹುದು ಎಂಬುದರ ಕುರಿತು ನಮಗೆ ಎಚ್ಚರಿಕೆ ನೀಡಿತು. ಅದರ ಆಧಾರದ ಮೇಲೆ, ಒಂದು ಟ್ರಕ್ ಅನ್ನು ಗುರುತಿಸಲಾಯಿತು. ನಿನ್ನೆ ನಾಗ್ಪುರ ಗ್ರಾಮೀಣ ಪೊಲೀಸರ ತಂಡವು ಆರೋಪಿಗಳನ್ನು ಬಂಧಿಸಿ, ನಾಗ್ಪುರದಿಂದ ಸುಮಾರು 700 ಕಿ.ಮೀ ದೂರದಲ್ಲಿರುವ ಗ್ವಾಲಿಯರ್-ಕಾನ್ಪುರ್ ಹೆದ್ದಾರಿಯಲ್ಲಿ ಟ್ರಕ್ ಅನ್ನು ವಶಪಡಿಸಿಕೊಂಡಿದೆ ಮತ್ತು ನಾವು ಈಗ ಆರೋಪಿಗಳನ್ನು ಬಂಧಿಸಿದ್ದೇವೆ. AI ಬಳಸಿ 36 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಲಾಗಿದೆ ಎಂದು ಹರ್ಷ ಪೊದ್ದಾರ್ ಹೇಳಿದರು.

ಅಂದಹಾಗೆ, ಮಹಾರಾಷ್ಟ್ರವು ಮಾರ್ವೆಲ್ (ಮಹಾರಾಷ್ಟ್ರ ಸಂಶೋಧನೆ ಮತ್ತು ವಿಜಿಲೆನ್ಸ್ ಫಾರ್ ಎನ್ಹ್ಯಾನ್ಸ್ಡ್ ಲಾ ಎನ್ಫೋರ್ಸ್ಮೆಂಟ್) ಎಂಬ ವಿಶೇಷ ಉದ್ದೇಶದ ವಾಹನವನ್ನು ರಚಿಸಿದೆ. ಇದು ದೇಶದ ಮೊದಲ ರಾಜ್ಯ ಮಟ್ಟದ ಪೊಲೀಸ್ AI ವ್ಯವಸ್ಥೆಯಾಗಿದ್ದು, ಇದು ಸಂಪೂರ್ಣವಾಗಿ ರಾಜ್ಯದ ಒಡೆತನದಲ್ಲಿದೆ. ಕಾನೂನು ಜಾರಿ ಸಂಸ್ಥೆಗಳು ಮತ್ತು ಮಹಾರಾಷ್ಟ್ರ ಸರ್ಕಾರದ ಇತರ ಇಲಾಖೆಗಳಲ್ಲಿ AI ಅನ್ನು ಪರಿಚಯಿಸಲು ಮತ್ತು ಬಳಸಲು ಇದನ್ನು ರಚಿಸಲಾಗಿದೆ. ಹೊರಗಿನಿಂದ ಪಡೆಯುವ ಬದಲು ಮಹಾರಾಷ್ಟ್ರ ಸರ್ಕಾರಕ್ಕೆ ಸೇರಿದ AI ಪರಿಹಾರಗಳನ್ನು ರಚಿಸಲು ಸಾಧ್ಯವಾಗುವಂತೆ ಸರ್ಕಾರಿ ಮೆಟಾಡೇಟಾವನ್ನು ವಿಶ್ಲೇಷಿಸಲು ಮತ್ತು ಬಳಸಲು ಸಾಧ್ಯವಾಗುತ್ತದೆ ಎಂಬುದೇ ಈ ಎಐ ವ್ಯವಸ್ಥೆಯ ಮೂಲ ಆಲೋಚನೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. (ಏಜೆನ್ಸೀಸ್​)