ನ್ಯೂಸ್

ದೇವನಹಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯ ದುರಂತ ಅಂತ್ಯ; ಮಗಳದ್ದು ಹತ್ಯೆ ಎಂದ ಕುಟುಂಬಸ್ಥರು!

ದೇವನಹಳ್ಳಿ: ಅವರಿಬ್ಬರು ಕಾಲೇಜಿಗೆ ಹೋಗುವಾಗಲೇ ಪ್ರೀತಿಸಿ ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದರು. ಇಬ್ಬರದ್ದು ಒಂದೇ ಜಾತಿ ಎಂಬ ಕಾರಣಕ್ಕೆ ಮನೆಯವರು ನಂತರ ಸುಮ್ಮನಾಗಿದ್ದರು. ವಿವಾಹವಾದ ಆರಂಭದಲ್ಲಿ ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು. ಆದರೆ, ಈ ನಡುವೆ ಕಳೆದ ರಾತ್ರಿ ರೂಂ ಒಳಗಡೆ ಹೋದ ಗೃಹಿಣಿ ಬೆಳಗಾಗುವುಷ್ಟರಲ್ಲಿ ಹೆಣವಾಗಿದ್ದಳು. ಇದೀಗ ಒಬ್ಬರು ಆತ್ಮಹತ್ಯೆ ಅಂದರೆ, ಮತ್ತೊಬ್ಬರು ಕೊಲೆ ಎನ್ನುತ್ತಿದ್ದಾರೆ.

ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ ಮೇಘನಾ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುಂಟೆ ಗ್ರಾಮದ‌ ನಿವಾಸಿ. ಮೇಘನಾ ಪ್ರೀತಿಸಿ ಮದುವೆಯಾಗಿ ಅದಾಗಲೇ ಒಂದು ವರ್ಷ ಕಳೆದಿದೆ. ಬಿಇ ವಿದ್ಯಾಭ್ಯಾಸದ ವೇಳೆ ಅಶೋಕ್ ಎಂಬಾತನನ್ನು ಪ್ರೀತಿಸಿ, ಮನೆ ಬಿಟ್ಟು ಹೋಗಿ ವಿವಾಹವಾಗಿದ್ದಳು. ದಂಪತಿಗೆ ಒಂದು ಮಗು ಇದೆ.

ಕೊಲೆಯೋ? ಆತ್ಮಹತ್ಯೆಯೋ?

ಮದುವೆಯಾಗಿ ಎರಡು ವರ್ಷ ಕಳೆಯುವಷ್ಟರಲ್ಲೆ ಇಬ್ಬರ ನಡುವೆ ಕಲಹ ಶುರುವಾಗಿದೆ. ಕಳೆದ ರಾತ್ರಿ ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ. ಈ ವೇಳೆ ಜಗಳ ಮಾಡಿಕೊಂಡು ಕೋಣೆ ಒಳಗಡೆ‌ ಹೋದ ಮೇಘನಾ ಬೆಳಾಗಗುವಷ್ಟರಲ್ಲಿ ಹೆಣವಾಗಿ ಪತ್ತೆಯಾಗಿದ್ದಾಳೆ. ಇದೀಗ ಗಂಡ ಅಶೋಕ್ ಮನೆಯವರೆ ಮೇಘನಾಳನ್ನು ಕೊಲೆ ಮಾಡಿದ್ದಾರೆ ಎಂದು ಮೇಘನಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಅದೊಂದು ಕಾರಣಕ್ಕೆ ಬೈದಿದ್ದೆ!

ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದು ಇಬ್ಬರು ಚೆನ್ನಾಗಿಯೇ ಸಂಸಾರ ಮಾಡುತ್ತಿದ್ದೆವು. ರಾತ್ರಿ ಊಟ ಬಡಿಸುವ ವಿಚಾರಕ್ಕೆ ಸಣ್ಣ ಗಲಾಟೆಯಾಗಿ ನಾನು ಬೈದ್ದಿದ್ದೆ. ಸಿಟ್ಟಿನಲ್ಲಿ ಆಕೆ‌ ಕೊಠಡಿ ಒಳಗಡೆ‌‌ ಹೋಗಿ ಬಾಗಿಲು ಹಾಕಿಕೊಂಡಿದ್ಲು. ಹೀಗಾಗಿ ಮಧ್ಯರಾತ್ರಿ ಮಗು ಅಳುತ್ತಿದೆ ಎಂತ ಕೊಠಡಿ ಒಳಗೆ ಹೋಗಿ ನೋಡಿದಾಗ ಆಕೆ ನೇಣು ಹಾಕಿರುವುದು ಗೊತ್ತಾಗಿದೆ ಎಂದು ಪತಿ ಅಶೋಕ್ ಹೇಳಿದ್ದಾನೆ.

ಪೊಲೀಸರು ಮೃತದೇವನ್ನು ಶವಾಗಾರಕ್ಕೆ‌ ರವಾನಿಸಿ ಪರೀಕ್ಷೆ ಮಾಡಿಸಿದ್ದಾರೆ. ಈ ಬಗ್ಗೆ ಹೊಸಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸಂಪೂರ್ಣ ತನಿಖೆ ನಂತರ ಮೇಘನಾಳದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದು ಬೆಳಕಿಗೆ ಬರಬೇಕಿದೆ.

ದಿಗ್ವಿಜಯ ನ್ಯೂಸ್, ದೊಡ್ಡಬಳ್ಳಾಪುರ.