ನ್ಯೂಸ್

ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಗೃಹಿಣಿ; ತವರು ಮನೆಯಲ್ಲಿ ಸಾವಿಗೆ ಶರಣು!

ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿ, ಡೆತ್‌ನೋಟ್ ಬರೆದಿಟ್ಟು ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆ.ಆರ್.ಪುರದ ಸೀಗೆಹಳ್ಳಿ ನಿವಾಸಿ ರಾಣಿ (27) ಮೃತ ಗೃಹಿಣಿ.

ಮೃತಳ ತಂದೆ ನೀಡಿದ ದೂರಿನ ಮೇರೆಗೆ ರಾಣಿಯ ಪತಿ ಜೀವನ್‌ಕುಮಾರ್, ಮಾವ ವರದರಾಜು, ಅತ್ತೆ ನಿರ್ಮಲ, ಮೈದುನರಾದ ವಿವೇಕ್‌ಕುಮಾರ್, ಮಧುಸೂದನ್ ವಿರುದ್ಧ ಎಫ್​​ಐಆರ್ ದಾಖಲು ಮಾಡಲಾಗಿದೆ ಎಂದು ವೈಟ್‌ಫೀಲ್ಡ್ ಉಪ ವಿಭಾಗ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ದೊಡ್ಡ ಮುದ್ದೇನಹಳ್ಳಿಯ ಸಾಫ್ಟ್​​ವೇರ್ ಇಂಜಿನಿಯರ್ ಜೀವನ್ ಕುಮಾರ್ ಮತ್ತು ರಾಣಿಗೆ 6 ತಿಂಗಳ ಹಿಂದೆ ಮದುವೆಯಾಗಿತ್ತು. ದಂಪತಿ ಜಯನಗರದಲ್ಲಿ ನೆಲೆಸಿದ್ದರು. ವಿವಾಹವಾದ 3 ತಿಂಗಳ ಬಳಿಕ ದಂಪತಿ ನಡುವೆ ಕೌಟುಂಬಿಕ ಕಲಹ ಉಂಟಾಗಿದೆ. ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಜೀವನ್ ಮತ್ತು ರಾಣಿಯನ್ನು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಮಾಲೋಚನೆ ಮಾಡಲಾಗಿತ್ತು. ಆದರೂ ಜೀವನ್ ಮತ್ತು ಅವರ ಕುಟುಂಬ ಸದಸ್ಯರ ಕಿರುಕುಳ ತಪ್ಪಿರಲಿಲ್ಲ. 

ನೊಂದ ರಾಣಿ, ತವರು ಮನೆಗೆ ಬಂದಿದ್ದಳು. ಫೆ.13ರ ಬೆಳಗ್ಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.