ಬೆಂಗಳೂರು: ಬಾಡಿಗೆ ವಿಚಾರಕ್ಕೆ ರಂಪಾಟ ಮಾಡಿದ ಲೇಡಿ ಓನರ್, ಬಾಡಿಗೆದಾರರ ಮೇಲೆ ಮಾರಣಾಂತಿಕವಾಗಿ ಹಲ್ಲೆಯನ್ನೂ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಲಗ್ಗೆರೆಯಲ್ಲಿ ಘಟನೆ ನಡೆದಿದ್ದು, ಮನೆ ಮಾಲೀಕಳಾದ ಮಹಾಲಕ್ಷ್ಮೀಯನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ ಪೂರ್ಣಿಮಾ ಮತ್ತು ರವಿಚಂದ್ರ ದಂಪತಿಯ ಮೇಲೆ ಬಾಡಿಗೆ ವಿಚಾರಕ್ಕೆ ಹಲ್ಲೆ ಮಾಡಿದ್ದಾರೆ. ಅವರಿದ್ದ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೂರ್ಣಿಮಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂರ್ಣಿಮಾ ದಂಪತಿ ಕಳೆದ ನಾಲ್ಕು ತಿಂಗಳಿಂದಲೂ ಬಾಡಿಗೆ ನೀಡಿಲ್ಲ ಎಂದು ಮಹಾಲಕ್ಷ್ಮೀ ಜಗಳ ತೆಗೆದಿದ್ದಳು. ಕಳೆದ ರಾತ್ರಿ ಇವರಿಬ್ಬರ ಮಧ್ಯೆ ಸಿಕ್ಕಾಪಟೆ ಜಗಳ ನಡೆದಿತ್ತು. ಇದೇ ವೇಳೆ ಮಹಾಲಕ್ಷ್ಮೀ ಪೂರ್ಣಿಮಾಳನ್ನು ಚಾಕುವಿನಿಂದ ಇರಿದಿದ್ದಳು. ಸದ್ಯ ಮಹಾಲಕ್ಷ್ಮೀ ವಿರುದ್ಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)