ನವದೆಹಲಿ: ಕಳೆದ ವರ್ಷದಂತೆ ಈ ವರ್ಷವೂ ಬೇಸಿಗೆಯಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿರಲಿದ್ದು, ಉಷ್ಣ ವಾತಾವರಣ ಜನರನ್ನು ಕಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದೇಶದ ಬಹುತೇಕ ಭಾಗದಲ್ಲಿ ಮಾರ್ಚ್ನಿಂದ ಮೇ ತಿಂಗಳವರೆಗೆ ಬಿಸಿಲ ತಾಪ ಹೆಚ್ಚಿರಲಿದೆ. ಉತ್ತರ ಭಾರತ, ದಕ್ಷಿಣ ಭಾರತದ ಬಯಲು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ವರೆಗೂ ಇರಲಿದೆ. ಒಟ್ಟಾರೆಯಾಗಿ ತಾಪಮಾನ ಸಾಮಾನ್ಯಕ್ಕಿಂತ 4.5 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಿರಲಿದೆ.
2024ರ ಬೇಸಿಗೆಯಲ್ಲಿ ತಾಪಮಾನ ಭಾರಿ ಏರಿಕೆ ಕಂಡಿತ್ತು. ಬೇಸಿಗೆ ಬಳಿಕವೂ ಸಹ ತಾಪಮಾನ ಏರುಮುಖವಾಗಿದ್ದು, ಮಾನ್ಸೂನ್ ಮುಗಿದ ಬಳಿಕ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ಸರಾಸರಿ ತಾಪಮಾನದಲ್ಲಿ 1.01 ಡಿಗ್ರಿ ಸೆಲ್ಸಿಯಸ್ ಏರಿಕೆ ಕಂಡಿತ್ತು. ಜನವರಿ ಮತ್ತು ಫೆಬ್ರವರಿಯಲ್ಲಿ ಚಳಿಗಾಲದಲ್ಲೂ ಸಹ ಸರಾಸರಿ ತಾಪಮಾನ 0.73 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆ ಕಂಡು ಬಂದಿತ್ತು.
124 ವರ್ಷದಲ್ಲಿ ಅತ್ಯಧಿಕ ತಾಪಮಾನ: ಫೆಬ್ರವರಿ ತಿಂಗಳಲ್ಲಿ ಚಳಿಗಾಲವಿದ್ದರೂ ತಾಪಮಾನ ಏರಿಕೆಯಾಗಿದ್ದು 124 ವರ್ಷದ ದಾಖಲೆ ಮುರಿದಿದೆ. 1901ರಿಂದ ಈಚೆಗೆ ಫೆಬ್ರವರಿ ತಿಂಗಳ ಸರಾಸರಿ ಗರಿಷ್ಠ ತಾಪಮಾನ ಭಾರಿ ಏರಿಕೆ ಕಂಡು 22 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಇನ್ನು ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇದೆ.
ಚಳಿಗಾಲದ ಮುಕ್ತಾಯದ ವೇಳೆಗೆ ರಾಜ್ಯದ ಕರಾವಳಿ ಭಾಗದಲ್ಲಿ ತಾಪಮಾನ ಭಾರಿ ಏರಿಕೆ ಕಂಡಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ತಾಪಮಾನ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಬಿಸಿಗಾಳಿ ಬೀಸುತ್ತಿದೆ. ಬೇಸಿಗೆಯಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.