ಧನಬಾದ್: ವೈದ್ಯರ ಕೊಠಡಿಗೆ ಪ್ರವೇಶಿಸುವ ಹಿರಿಯ ಅಧಿಕಾರಿಯ ಪತ್ನಿಗೆ ಚಪ್ಪಲಿ ತೆಗೆಯುವಂತೆ ಹೇಳಿದ್ದಕ್ಕೆ ಆಸ್ಪತ್ರೆಯ ನೌಕರನೊಬ್ಬನನ್ನು ಅರೆಬೆತ್ತಲೆಗೊಳಿಸಿ ಮನೆಗೆ ಕಳುಹಿಸಿರುವ ಘಟನೆ ಝಾರ್ಖಂಡ್ನ ರಾಂಚಿಯ ಧನಬಾದ್ನಲ್ಲಿ ನಡೆದಿದೆ.
ಇದನ್ನೂ ಓದಿ: ಹಿಜಾಬ್ಗೆ ಆಕ್ಷೇಪ: ಪ್ರಾಂಶುಪಾಲರು ಸೇರಿ ಮೂವರು ಶಿಕ್ಷಕರ ವಿರುದ್ಧ ದೂರು ದಾಖಲು
ಘಟನೆಯಿಂದ ಆಘಾತಕ್ಕೊಳಗಾದ ಆಸ್ಪತ್ರೆಯ ಸಿಬ್ಬಂದಿ ಬಸಂತ್ ಉಪಾಧ್ಯಾಯ ಖಿನ್ನತೆಗೆ ಒಳಗಾಗಿದ್ದು, ಈತನನ್ನು ವಿಭಾಗೀಯ ರೈಲ್ವೆ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನೆ ಹಿನ್ನೆಲೆ:
ವಿಭಾಗೀಯ ರೈಲ್ವೆ ವ್ಯವಸ್ಥಾಪಕನ(ಡಿಆರ್‌ಎಂ) ಪತ್ನಿ ತಪಾಸಣೆಗಾಗಿ ಧನಬಾದ್ನ ವಿಭಾಗೀಯ ರೈಲ್ವೆ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಅಟೆಂಡೆಂಟ್ ಬಸಂತ್ ಆಕೆಗೆ ವೈದ್ಯರ ಕೊಠಡಿಗೆ ಹೋಗುವ ಮುನ್ನ ಚಪ್ಪಲಿಗಳನ್ನು ಹೊರಗಡೆ ಬಿಟ್ಟು ಹೋಗುವಂತೆ ಹೇಳಿದ್ದಾನೆ. ಆದರೆ ಆಕೆ ಬಸಂತ್ನ ಮಾತನ್ನು ಲೆಕ್ಕಿಸದೇ ಹಾಗೆಯೇ ಒಳ ನಡೆದಿದ್ದಾಳೆ.
ನಂತರ ಡಿಆರ್‌ಎಂ, ಬಸಂತ್ನನ್ನು ತಮ್ಮ ಚೇಂಬರ್‌ಗೆ ಕರೆತರುವಂತೆ ಮುಖ್ಯ ವೈದ್ಯಕೀಯ ಅಧೀಕ್ಷಕರಿಗೆ ಹೇಳಿದ್ದಾರೆ. ತನ್ನ ಹೆಂಡತಿಯನ್ನು ವೈದ್ಯರ ಕೋಣೆಗೆ ಪ್ರವೇಶಿಸುವುದನ್ನು ನಿಲ್ಲಿಸಿದ್ದಕ್ಕಾಗಿ ಆತ, ವೈದ್ಯಕೀಯ ಅಧೀಕ್ಷಕ ಹಾಗೂ ಬಸಂತ್ಗೆ ಮನಬಂದಂತೆ ಬೈದಿದ್ದಾರೆ. ನಂತರ ಬಸಂತ್ಗೆ ಬಟ್ಟೆ ಕಳಚಿ ಅರೆಬೆತ್ತಲೆಯಾಗಿ ಮನೆಗೆ ಹೋಗುವಂತೆ ಹೇಳಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯ ಐಸಿಯುನಲ್ಲೇ ಡಾನ್ಸ್: ಬಾಲಕನ ಸಕಾರಾತ್ಮಕ ಮನೋಭಾವಕ್ಕೆ ನೆಟ್ಟಿಗರು ಫಿದಾ!
ಆದರೆ ಹಿರಿಯ ಡಿಸಿಎಂ ಅಮರೇಶ್ ಕುಮಾರ್, ನಮ್ಮ ಗ್ರೂಪ್-ಡಿ ಉದ್ಯೋಗಿಯೊಬ್ಬರು ಸೌತ್ ಈಸ್ಟರ್ನ್ ರೈಲ್ವೇಸ್ ಮಹಿಳಾ ಕಲ್ಯಾಣ ಸಂಸ್ಥೆ(SERWWO) ಅಧ್ಯಕ್ಷರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದಕ್ಕಾಗಿ ಡಿಎಂಆರ್ ಆತನನ್ನು ಕೊಠಡಿಗೆ ಕರೆದು ವಾಗ್ದಂಡನೆ ಮಾಡಿದ್ದಾರೆ. ಆದರೆ, ಬಟ್ಟೆ ತೆಗೆಯುವಂತೆ ಹೇಳಿರುವ ಆರೋಪ ಸಂಪೂರ್ಣ ನಿರಾಧಾರವಾಗಿದೆ ಎಂದು ಹೇಳಿದ್ದಾರೆ.
ಘಟನೆಯಿಂದ ಕುಪಿತಗೊಂಡಿರುವ ಉಳಿದ ಸಿಬ್ಬಂದಿ, ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಡಿಆರ್‌ಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ರೈಲ್ವೇ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ಸಮಾಧಾನಪಡಿಸಲು ಯತ್ನಿಸಿದರೂ ಧರಣಿ ಹಿಂಪಡೆಯಲು ಆಸ್ಪತ್ರೆ ಸಿಬ್ಬಂದಿ ಸಿದ್ಧರಿರಲಿಲ್ಲ. ಘಟನೆಯ ಬಗ್ಗೆ ಕ್ಷಮೆಯಾಚಿಸಲು ಸಿಎಂಎಸ್ ಒಪ್ಪಿಗೆ ನೀಡಿದ ನಂತರವೇ ಆಸ್ಪತ್ರೆ ಸಿಬ್ಬಂದಿ ಕೆಲಸಕ್ಕೆ ಮರಳಿದ್ದಾರೆ.(ಏಜೆನ್ಸೀಸ್)