ನ್ಯೂಸ್

ರೋಗಿಯನ್ನು ಮನಬಂದಂತೆ ಥಳಿಸಿದ ಆಸ್ಪತ್ರೆ ಸಿಬ್ಬಂದಿ; ವಿಡಿಯೋ ಕಂಡು ಹೌಹಾರಿದ ನೆಟ್ಟಿಗರು

ಮುಂಬೈ: ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬ ರೋಗಿಯು ವೈದರು ಹಾಗೂ ನರ್ಸ್​ಗಳ ಮೇಲೆ ನಂಬಿಕೆಯಿಟ್ಟು ಅವರುಗಳನ್ನು ದೇವರೆಂದು ಭಾವಿಸಿ ಅಡ್ಮಿಟ್​ ಆಗಿರುತ್ತಾರೆ. ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬ ರೋಗಿಯನ್ನು ಚೆನ್ನಾಗಿ ನೋಡಿಕೊಂಡು ಅವರನ್ನು ಉಪಚರಿಸಿ ಹುಷಾರು ಮಾಡಿ ಮನೆಗೆ ವಾಪಸ್​ ಕಳುಹಿಸುವುದು ಪ್ರತಿಯೊಬ್ಬ ವೈದ್ಯರು ಹಾಗೂ ನರ್ಸ್​ಗಳ ಕರ್ತವ್ಯವಾಗಿರುತ್ತದೆ. ಆದರೆ, ಕೆಲ ಆಸ್ಪತ್ರೆಗಳಲ್ಲಿ ಸಿಬ್ಬಂದಿಯು ದಾಖಲಾಗುವ ರೋಗಿಗಳ ಮೇಲೆ ದರ್ಪ ತೋರುತ್ತಾರೆ. ಈ ವಿಚಾರ ಆಗಿಂದಾಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುತ್ತವೆ. ಇದೀಗ ಅದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಮಹಾರಾಷ್ಟ್ರದ ರಾಜಧಾನಿ ಮುಂಬೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್​ ಮಾಡಲಾಗುತ್ತಿದೆ. ಪ್ರೊ. ಸುಧಾಂಶು ತ್ರಿವೇದಿ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೂ 1.3 ಮಿಲಿಯನ್​ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ವೃದ್ಧ ರೋಗಿಯೊಬ್ಬರ ಎದೆಗೆ ಸಿಬ್ಬಂದಿಯೋರ್ವ ತನ್ನ ಮೊಣಕೈಯಿಂದ ರೋಗಿಯ ಹೊಟ್ಟೆಗೆ ಹೊಡೆಯುತ್ತಾನೆ. ಬಳಿಕ ಕ್ಯಾಮರಾ ಅಳವಡಿಸಿರುವುದನ್ನು ಕಂಡು ಮತ್ತೊಮ್ಮೆ ಮೊಣಕೈಯಿಂದ ರೋಗಿಯ ಹೊಟ್ಟೆಗೆ ಹೊಡೆದು ಸಿಬ್ಬಂದಿ ತೆರಳುತ್ತಿರುವುದನ್ನು ನೋಡಬಹುದಾಗಿದೆ. ತನಗೆ ಬಿದ್ದ ಏಟಿಗೆ  ನೋವನ್ನು ತಡೆಯಲಾರದೆ ರೋಗಿ ನರಳಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​​ ಆಗುತ್ತಿದೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಹಲವರು ಸಿಬ್ಬಂದಿಯ ನಡೆಗೆ ಕಿಡಿಕಾರಿದ್ದು, ಈತನನ್ನು ಕೂಡಲೇ ಕೆಲಸದಿಂದ ವಜಾ ಮಾಡಿ ಪೊಲೀಸರಿಗೆ ಒಪ್ಪಿಸಿ ಎಂದು ಆಗ್ರಹಿಸಿದ್ದಾರೆ. ಜನರು ಆಸ್ಪತ್ರೆಗೆ ದೇವಸ್ಥಾನ ಅಂದುಕೊಂಡಿದ್ದಾರೆ, ಆದರೆ ಈತ ರೋಗಿಗೆ ದೆವ್ವದ ರೂಪದಲ್ಲಿ ಕಾಡಿದ್ದಾನೆ ಎಂದು ಕಮೆಂಟ್​ ಮೂಲಕ ಕಿಡಿಕಾರಿದ್ದಾರೆ.