ಮಧ್ಯಪ್ರದೇಶದ ಗ್ವಾಲಿಯರ್ ದೇವಸ್ಥಾನ ಭೀಕರ ಅಪಘಾತ 
ನ್ಯೂಸ್

ಗ್ವಾಲಿಯರ್ ದೇವಸ್ಥಾನ ಭೀಕರ ದುರಂತ: ಟ್ರಕ್ ಹರಿದು 15 ಭಕ್ತರು ಸಾವು, 8 ಪೊಲೀಸರ ಅಮಾನತು | Gwalior Truck Accident

ಮಧ್ಯಪ್ರದೇಶದ ಗ್ವಾಲಿಯರ್‌ನ ಶೀತಲಾ ಮಾತಾ ದೇವಸ್ಥಾನದ ಬಳಿ ಟ್ರಕ್ ಹರಿದು 15 ಮಂದಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಂಟು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದು, ಸಿಎಸ್‌ಪಿಯನ್ನು ಹುದ್ದೆಯಿಂದ ತೆರವುಗೊಳಿಸಲು ಮುಖ್ಯಮಂತ್ರಿ ಮೋಹನ್ ಯಾದವ್ ಆದೇಶಿಸಿದ್ದಾರೆ.

• ಗ್ವಾಲಿಯರ್ ದೇವಸ್ಥಾನದ ಬಳಿ ಟ್ರಕ್ ಹರಿದು 15 ಮಂದಿ ಸಾವು

• ಭೀಕರ ಟ್ರಕ್ ಅಪಘಾತದಲ್ಲಿ 27 ಜನರಿಗೆ ಗಾಯ

• ಸಿಎಸ್‌ಪಿ ಹುದ್ದೆಯಿಂದ ತೆರವು, 8 ಪೊಲೀಸ್ ಸಿಬ್ಬಂದಿ ಅಮಾನತು

Gwalior Temple Accident: ಮಧ್ಯಪ್ರದೇಶದ ಗ್ವಾಲಿಯರ್‌ನ ಶೀತಲಾ ಮಾತಾ ದೇವಸ್ಥಾನದ ಬಳಿ ಭಕ್ತರ ಮೇಲೆ ಟ್ರಕ್ ಹರಿದ ಪರಿಣಾಮ 15 ಮಂದಿ ಮೃತಪಟ್ಟಿದ್ದು, 27 ಜನರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಡಿ ನಗರ ಪೊಲೀಸ್ ಅಧೀಕ್ಷಕರನ್ನು (ಸಿಎಸ್‌ಪಿ) ಹುದ್ದೆಯಿಂದ ತೆರವುಗೊಳಿಸಲು ಮುಖ್ಯಮಂತ್ರಿ ಮೋಹನ್ ಯಾದವ್ ಆದೇಶಿಸಿದ್ದಾರೆ. ಅಲ್ಲದೆ, ಮೂವರು ಠಾಣಾಧಿಕಾರಿಗಳು ಸೇರಿದಂತೆ ಎಂಟು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಶನಿವಾರ ತಡರಾತ್ರಿ ಸಪ್ತಮಿ ಆಚರಣೆ ಹಿನ್ನೆಲೆಯಲ್ಲಿ ಶೀತಲಾ ಮಾತಾ ದೇವಸ್ಥಾನದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಭಾನುವಾರ ಬೆಳಗಿನ ಜಾವ 1.30ರ ಸುಮಾರಿಗೆ ಭತ್ತ ತುಂಬಿಕೊಂಡು ಚಿನೋರ್ ಕಡೆಯಿಂದ ಬರುತ್ತಿದ್ದ ಟ್ರಕ್, ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಸಾದದ ಅಂಗಡಿಗಳು ಹಾಗೂ ಭಕ್ತರ ಮೇಲೆ ಹರಿದಿದೆ. ಬಳಿಕ ದೇವಸ್ಥಾನದ ಪ್ರವೇಶ ದ್ವಾರಕ್ಕೆ ಡಿಕ್ಕಿ ಹೊಡೆದಿದ್ದು, ಗೋಡೆಯ ಒಂದು ಭಾಗ ಕುಸಿದು ಹಲವರು ಅವಶೇಷಗಳಡಿ ಸಿಲುಕಿದ್ದರು.

41 ಜನರಿಗೆ ಟ್ರಕ್ ಡಿಕ್ಕಿ

ಘಟನೆಯಲ್ಲಿ ಐದರಿಂದ ಆರು ಪ್ರಸಾದದ ಅಂಗಡಿಗಳು ಹಾನಿಗೀಡಾಗಿದ್ದು, ಸುಮಾರು 41 ಜನರಿಗೆ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ತಂಡಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಅವಶೇಷಗಳಡಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ.

ಟ್ರಕ್‌ನಲ್ಲಿ ತಾಂತ್ರಿಕ ದೋಷದಿಂದ ಅನಾಹುತ

ಪ್ರಾಥಮಿಕ ತನಿಖೆಯ ಪ್ರಕಾರ, ಟ್ರಕ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿರಬಹುದು ಎಂದು ಗ್ವಾಲಿಯರ್ ಪೊಲೀಸ್ ವರಿಷ್ಠಾಧಿಕಾರಿ ಧರ್ಮವೀರ್ ಯಾದವ್ ತಿಳಿಸಿದ್ದಾರೆ. ಟ್ರಕ್ ಮಾಲೀಕ ಮೋಹಿತ್ ಸಿಂಗ್ ಮತ್ತು ಚಾಲಕ ದಿಲ್ಬಾಗ್ ಸಿಂಗ್ ಅವರನ್ನು ಬಂಧಿಸಲಾಗಿದೆ.

ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ

ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಇತರ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: Psychology: ರೂಪ ನೋಡಿ ವ್ಯಕ್ತಿತ್ವ ಅಳೆಯುತ್ತೀರಾ? ನಿಮ್ಮ ಮನಸ್ಸಿನ ಮೋಸದ ಆಟವೇ ಹ್ಯಾಲೋ ಎಫೆಕ್ಟ್!

ಪ್ರಧಾನಿ ಕಚೇರಿಯೂ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ.(ಏಜೆನ್ಸೀಸ್​)