ನ್ಯೂಸ್

ಪೆಟ್ರೋಲ್​ ಟ್ಯಾಂಕರ್​ ಪಲ್ಟಿಯಾಗಿ ಸ್ಫೋಟ; 25 ಮಂದಿ ಸಾವು, 40ಕ್ಕೂ ಅಧಿಕ ಜನ ಗಂಭೀರ

ನವದೆಹಲಿ: ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್​ ಟ್ಯಾಂಕರ್​ ಪಲ್ಟಿಯಾಗಿ ಸ್ಫೋಟ ಸಂಭವಿಸಿದ ಪರಿಣಾಮ 25 ಮಂದಿ ಮೃತಪಟ್ಟು, 40 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈಟಿ ದೇಶದಲ್ಲಿ ನಡೆದಿದೆ.

ಮಿರಾಗೋನೆಯಲ್ಲಿ ಈ ಘಟನೆ ಸಂಭವಿಸಿದ್ದು, ಹೈಟಿಯ ಪ್ರಧಾನಿ ಗ್ಯಾರಿ ಕೊನಿಲ್ಲೆ ದುರ್ಘಟನೆಯ ಕುರಿತಂತೆ ಸಂತಾಪ ಸೂಚಿಸಿದ್ದು, ಮೃತರ ಹಾಗೂ ಗಾಯಾಳುಗಳ ಕುಟುಂಬದಗಳಿಗೆ ಅಗತ್ಯೆ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಘಟನೆಯ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ನಗರದ ಪೂರ್ವ ಅಂಚಿನಲ್ಲಿರುವ ಸನ್ಮಾರಿ ಪ್ರದೇಶದಲ್ಲಿ ಮಧ್ಯರಾತ್ರಿ ಪೆಟ್ರೋಲ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ನಂತರ ಕೆಲವರು ರಸ್ತೆಯಲ್ಲಿ ಸುರಿದ ಪೆಟ್ರೋಲ್ ಸಂಗ್ರಹಿಸಲು ಓಡಿದರು. ಈ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 25 ಮಂದಿ ಮೃತಪಟ್ಟಿದ್ದಾರೆ. 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮನೆಗಳು ಸುಟ್ಟು ಕರಕಲಾಗಿದ್ದು, ಬೆಂಕಿ ವೇಗವಾಗಿ ಹರಡಿದ ಪರಿಣಾಮ ಹಲವರು ಸಜೀವ ದಹನವಾಗಿದ್ದಾರೆ ಎಂದು ತಿಳಿಸಿದ್ದಾರೆ.