ನ್ಯೂಸ್

ಯೂಟ್ಯೂಬರ್​ ಭೇಟಿ ಮಾಡಲು ಸೈಕಲ್​ನಲ್ಲಿ 250 ಕಿ.ಮೀ ಸಂಚರಿಸಿದ 13ರ ಬಾಲಕ; ಮುಂದೆ ನಡೆದದ್ದಿಷ್ಟು...

ನವ ದೆಹಲಿ: ಯೂಟ್ಯೂಬ್​ ಚಾನೆಲ್​ ಒಂದರ ತನ್ನ ನೆಚ್ಚಿನ ಯೂಟ್ಯೂಬರ್​​ನನ್ನು ಭೇಟಿ ಮಾಡಲೆಂದು ಬಾಲಕನೊಬ್ಬ 250 ಕಿ.ಮೀ ಸೈಕಲ್ ತುಳಿದುಕೊಂಡು ದೆಹಲಿಗೆ ಪ್ರಯಾಣಿಸಿದ್ದಾನೆ.

ಪಂಜಾಬ್​ನ ಪಟಿಯಾಲದ 13 ವರ್ಷದ ಬಾಲಕ ಮೂರು ದಿನಗಳ ಕಾಲ ಸೈಕಲ್ ತುಳಿಯುತ್ತಾ ದೆಹಲಿ ತಲುಪಿದ್ದಾನೆ. ಬಾಲಕ ಮನೆಯಿಂದ ಹೊರಹೋಗಿರುವುದು ಪೋಷಕರ ಅರಿವಿಗೆ ಬಂದಿಲ್ಲ. ಹೇಳದೆ ಸೈಕಲ್ ಏರಿ ತನ್ನ ನೆಚ್ಚಿನ ಯೂಟ್ಯೂಬರ್​ನನ್ನು ನೋಡಲು ಹೋಗಿದ್ದಾನೆ. ಮಗ ಮನೆಯಲ್ಲಿ ಕಾಣುತ್ತಿಲ್ಲವೆಂದು ಪೋಷಕರು ಹುಡುಕಾಡಿದ್ದಾರೆ. ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪಂಜಾಬ್​ನಿಂದ ದೆಹಲಿಗೆ ಬಂದ ಬಾಲಕ ಯೂಟ್ಯೂಬರ್ ನಿಶ್ಚಯ್ ಮಲ್ಹಾನ್​ನನ್ನು ಭೇಟಿ ಮಾಡಲು ಆತನ ಅಪಾರ್ಟ್​​ಮೆಂಟ್​ ತೆರಳಿದ್ದಾನೆ. ಆದರೆ ನಿಶ್ಚಯ್ ಮಲ್ಹಾನ್​ ಅಲ್ಲಿರಲಿಲ್ಲ. ಆತ ದುಬೈಗೆ ತೆರಳಿದ್ದ.

ಪೊಲೀಸರು ಸಾಮಾಜಿಕ ಜಾಲತಾಣ ಹಾಗೂ ಸಿಸಿಟಿವಿ ದೃಶ್ಯಗಳ ಸಹಾಯದಿಂದ ಬಾಲಕನನ್ನು ರಕ್ಷಿಸಿದ್ದಾರೆ. ವಿಷಯ ತಿಳಿದ ಯೂಟ್ಯೂಬರ್​​ ಬಾಲಕನ ಮಾಹಿತಿ ಶೇರ್ ಮಾಡಿ ಜನರಲ್ಲಿ ರಕ್ಷಿಸಲು ಮನವಿ ಸಲ್ಲಿಸಿದ್ದರು.

ಯೂಟ್ಯೂಬರ್​ ಪೀತಾಂಪುರ ಪ್ರದೇಶದಲ್ಲಿ ನೆಲೆಸಿರುವುದನ್ನು ದೆಹಲಿ ಪೊಲೀಸರು ಮೊದಲು ಪತ್ತೆ ಹಚ್ಚಿದ್ದಾರೆ. ನಂತರ ಅಲ್ಲಿನ ನೆರೆಯ ನಿವಾಸಿಗಳ ಸಹಾಯ ಪಡೆದುಕೊಂಡು ಬಾಲಕ ಪಂಜಾಬ್​ನಿಂದ ಬರುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ಪರಿಶೀಲಿಸಿದಾಗ ಯೂಟ್ಯೂಬರ್ ವಿದೇಶಕ್ಕೆ ತೆರಳಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಬಾಲಕನನ್ನು ಪಾರ್ಕ್​ ಒಂದರಲ್ಲಿ ಪೊಲೀಸರು ಪತ್ತೆ ಹಚ್ಚಿ ಮಾಹಿತಿ ನೀಡಿದ್ದಾರೆ. ಪೋಷಕರು ಬಂದು ಬಾಲಕನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.