ಬೆಂಗಳೂರು: ಬಡವ ರಾಸ್ಕಲ್ ಹಾಗೂ ಡೇರ್ ಡೆವಿಲ್ ಮುಸ್ತಫಾ ಸಿನಿಮಾದಲ್ಲಿ ಹಾಸ್ಯದ ಹೊನಲು ಹರಿಸಿರುವ ಹಾಸ್ಯನಟ ನಾಗಭೂಷಣ್ ಅವರ ವಿರುದ್ಧ ಹಿಟ್ ಅಂಡ್ ರನ್ ಆರೋಪ ಕೇಳಿಬಂದಿದ್ದು, ಪ್ರಕರಣ ದಾಖಲಾಗಿದೆ.
ಕುಮಾರಸ್ವಾಮಿ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪಾರ್ಥ ಎಂಬುವವರು ದೂರು ದಾಖಲಿಸಿದ್ದು, ತಮ್ಮ ತಂದೆ-ತಾಯಿಗೆ ನಾಗಭೂಷಣ್ ಅವರ ಕಾರು ಡಿಕ್ಕಿಯಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಉತ್ತರಹಳ್ಳಿಯಿಂದ ಕೋಣನಕುಂಟೆ ಕ್ರಾಸ್ ದಾರಿಯ ಮಧ್ಯೆ ಅಪಘಾತ ನಡೆದಿದೆ.
ದಂಪತಿ ರಸ್ತೆಯ ಫುಟ್ ಪಾತ್ ಮೇಲೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯಾಗಿದ್ದು, ಪಾರ್ಥ ಅವರ ತಾಯಿ ಪ್ರೇಮ (48) ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ತಂದೆ ಕೃಷ್ಣ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಈ ವೇಳೆ ನಾಗಭೂಷಣ್ ಅವರು ವಾಹದಲ್ಲಿದ್ದರು ಎಂದು ತಿಳಿದುಬಂದಿದೆ. ನಾಗಭೂಷಣ್ ಅವರು ಆರ್. ಆರ್. ನಗರದಿಂದ ಉತ್ತರಹಳ್ಳಿ ಮುಖಾಂತರ ಮನೆಗೆ ಹೋಗುತ್ತಿದ್ದರು. ಇದೇ ವೇಳೆ ಫುಟ್ಪಾತ್ ಮೇಲೆ ದಂಪತಿ ಹೋಗುತ್ತಿದ್ದರು. ಫುಟ್ಪಾತ್ ಮೇಲೆ ಕಾರು ಹತ್ತಿಸಿ ಅಪಘಾತ ಮಾಡಿರುವ ಆರೋಪ ಕೇಳಿಬಂದಿದೆ.
ಸದ್ಯಕ್ಕೆ ಪೊಲೀಸರು ನಾಗಭೂಷಣ್ ಅವರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ನಾಗಭೂಷಣ್ ಅವರು ಅಧಿಕಾರಿಗಳ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
ಹಾಸ್ಯನಟನಾಗಿ ನಾಗಭೂಷಣ್ ಅವರು ಇತ್ತೀಚೆಗೆ ಚಿತ್ರೆಂಗದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದರು. ಟಗರುಪಲ್ಯ ಮೂಲಕ ಹೀರೋ ಆಗಿ ಎಂಟ್ರಿ ಕೊಡಲು ಸಜ್ಜಾಗಿದ್ದರು. ಈ ಚಿತ್ರವನ್ನು ಡಾಲಿ ಧನಂಜಯ್ ಅವರು ತಮ್ಮ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತಾ ನಾಯಕಿಯಾಗಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿತ್ತು. ಅಷ್ಟರಲ್ಲಿ ಇಂತಹ ಘಟನೆ ನಡೆದಿರುವುದು ದುರಾದೃಷ್ಟಕರ ಸಂಗತಿಯಾಗಿದೆ.
ನಾಗಭೂಷಣ್ ಅವರು ಇತ್ತೀಚೆಗೆ ಹೊಯ್ಸಳ, ಇಕ್ಕಟ್ಟು ಹಾಗೂ ಕೌಸಲ್ಯಸುಪ್ರಜಾರಾಮ ಸಿನಿಮಾದಲ್ಲಿ ನಟಿಸಿದ್ದರು.