ನ್ಯೂಸ್

ಹಿಟ್ ಅಂಡ್ ರನ್: ನಟಿ ನಂದಿನಿ ಕಶ್ಯಪ್ ಬಂಧಿಸಿದ ಪೊಲೀಸರು| Nandini Kashyap

Nandini Kashyap: ಅಸ್ಸಾಂನ ಗುವಾಹಟಿಯಲ್ಲಿ ನಡೆದಿದ್ದ ಹಿಟ್ ಅಂಡ್ ರನ್ ಅಪಘಾತದಲ್ಲಿ 21 ವರ್ಷ ವಿದ್ಯಾರ್ಥಿಯೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಅಸ್ಸಾಮಿ ನಟಿ ನಂದಿನಿ ಕಶ್ಯಪ್​ರನ್ನು ಪೊಲೀಸರು ಬಂಧಿಸಿದ್ದಾರೆ.

ಜುಲೈ 25ರಂದು ಗುವಾಹಟಿಯ ದಖಿಂಗಾವ್ ಪ್ರದೇಶದಲ್ಲಿ ಬೆಳಗಿನ ಜಾವ 3 ಗಂಟೆಗೆ ಅಪಘಾತ ಸಂಭಿವಿಸಿತ್ತು. ಘಟನೆಯಲ್ಲಿ ಸಮಿಯುಲ್ ಹಕ್(21) ಎಂಬ ಮೃತಪಟ್ಟಿದ್ದನು. ನಲ್ಬರಿ ಪಾಲಿಟೆಕ್ನಿಕ್ ಕಾಲೇಜಿ ವಿದ್ಯಾರ್ಥಿಯಾಗಿದ್ದು, ಗುವಾಹಟಿ ಮುನ್ಸಿಪಾಲ್ ಕಾರ್ಪೋರೇಷನ್​ನಲ್ಲಿಯೂ ಕೆಲಸ ಮಾಡ್ತಿದ್ದ ಎನ್ನಲಾಗಿದೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ 120 ಕಿಮೀ ವೇಗದಲ್ಲಿ ನಟಿ ನಂದಿನಿ ಕಾರು ಚಲಾಯಿಸುತ್ತಿದ್ದು, ಇದೇ ವೇಳೆ ಅದೇ ರಸ್ತೆಯಲ್ಲಿ ವಿದ್ಯುತ್ ದೀಪ ದುರಸ್ತಿ ಮಾಡ್ತಿದ್ದ ಕೆಲಸಗಾರ ಸಮಿಯುಲ್ ಹಕ್​ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.

ಏತನ್ಮಧ್ಯೆ ನಟಿ ಗಾಯಗೊಂಡ ಯುವಕನಿಗೆ ಸಹಾಯ ಮಾಡದೆ ಅಪಘಾತದ ಸ್ಥಳದಿಂದ ಪರಾರಿಯಾಗಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನನ್ನು ಅಲ್ಲೇ ಇದ್ದವರು ಆಸ್ಪತ್ರೆಗೆ ಕರೆದೊಯ್ದರು, ಇನ್ನು ಕೆಲವರು ನಟಿಯ ಕಾರನ್ನು ಹಿಂಬಾಲಿಸಿದರು. ಈ ವೇಳೆ ಕಾರು ಚಲಾಯಿಸಿದ್ದು ನಟಿ ನಂದಿನಿ ಅನ್ನುವುದನ್ನು ಕಂಡುಕೊಂಡಿದ್ದು, ಅಪಾರ್ಟ್​​ಮೆಂಟ್​ನಲ್ಲಿ ಐಷರಾಮಿ ಕಾರು ಮರೆ ಮಾಡಲು ಯತ್ನಿಸಿದಾಗ ಜನರು ಕಾರನ್ನು ಸುತ್ತುವರೆದು ವಾಗ್ವಾದ ನಡೆಸಿದ್ದರು ಎನ್ನಲಾಗಿದೆ.

ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಮಿಯುಲ್ ಹಕ್ ಸಾವನ್ನಪ್ಪಿದ್ದನು. ಇದರಿಂದ ಅಸ್ಸಾಂನಲ್ಲಿ ನಟಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ತಡರಾತ್ರಿ ನಟಿ ನಂದಿನಿಯನ್ನ ಗುವಾಹಟಿ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ರುದ್ರ ಎಂಬ ಸಿನಿಮಾದಲ್ಲಿ ನಂದಿನಿ ಕಶ್ಯಪ್ ನಟಿಸಿದ್ದರು. ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತ್ತು. (ಏಜೆನ್ಸೀಸ್)