ನ್ಯೂಸ್

ಐತಿಹಾಸಿಕ ತೀರ್ಪ; ಭ್ರಷ್ಟಾಚಾರಮುಕ್ತ ಚುನಾವಣೆಗೆ ನಾಂದಿಯಾಗಲಿ

ಚುನಾವಣಾ ಬಾಂಡ್ ಯೋಜನೆ ಮೂಲಕ ದಾನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಕ್ರಮ ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಬಾಂಡ್​ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಕ್ಷಣವೇ ನಿಲ್ಲಿಸಬೇಕು ಎಂದಿದೆ. ಈ ಪ್ರಕ್ರಿಯೆ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದರ ಕುರಿತ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಬೇಕು. ತನಗೆ ಸಿಕ್ಕ ಮಾಹಿತಿಯನ್ನು ಮಾರ್ಚ್ 13ರ ಒಳಗಾಗಿ ಚುನಾವಣಾ ಆಯೋಗ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು ಎಂದು ಸಾಂವಿಧಾನಿಕ ಪೀಠ ನಿರ್ದೇಶನ ನೀಡಿರುವುದು ಗಮನಾರ್ಹ. ಚುನಾವಣಾ ಬಾಂಡ್ ಯೋಜನೆಗೆ ಆರಂಭದಲ್ಲೇ ಅಪಸ್ವರ ಕೇಳಿಬಂದಿತ್ತಾದರೂ, ಕಂಪನಿ ಮತ್ತು ತೆರಿಗೆ ಕಾನೂನುಗಳಿಗೆ ತಿದ್ದುಪಡಿ ತಂದು 2018ರಲ್ಲಿ ಚುನಾವಣಾ ಬಾಂಡ್ ವ್ಯವಸ್ಥೆ ಜಾರಿಗೆ ತರಲಾಗಿತ್ತು.

ವ್ಯವಸ್ಥೆಯ ಶುದ್ಧೀಕರಣ, ಭ್ರಷ್ಟಾಚಾರಮುಕ್ತ ಚುನಾವಣೆ ಮತ್ತು ಕಪು್ಪಹಣ್ಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್​ನ ಈ ತೀರ್ಪು ಪ್ರಮುಖವಾಗಿದೆ. ಈ ಯೋಜನೆ ಕುರಿತಾದ ಆತಂಕಗಳನ್ನು ಸ್ಪಷ್ಟವಾಗಿ ಹೇಳಿರುವ ನ್ಯಾಯಾಲಯ, ಜನರ ಮಾಹಿತಿ ಪಡೆಯುವ ಹಕ್ಕನ್ನು ಇದು ಉಲ್ಲಂಘಿಸುತ್ತದೆ. ಕಾಪೋರೇಟ್ ಕಂಪನಿಗಳಿಂದ ಅಕ್ರಮ ಕೊಡು-ಕೊಳ್ಳುವಿಕೆಗೆ ಆಸ್ಪದವಾಗುತ್ತದೆ ಎಂದಿದೆ. ಕಪು್ಪಹಣ ತಡೆಯಲು ಚುನಾವಣಾ ಬಾಂಡ್ ಮಾತ್ರವೇ ಮಾರ್ಗವಲ್ಲ ಎಂದೂ ಸ್ಪಷ್ಟಪಡಿಸಿದೆ. ಈ ತೀರ್ಪು ಎಲ್ಲ ರಾಜಕೀಯ ಪಕ್ಷಗಳಿಗೂ ಪಾಠವಾಗಿದ್ದು, ದೇಣಿಗೆ ಸ್ವೀಕರಿಸುವ ಕ್ರಮಗಳನ್ನು ಹೆಚ್ಚು ಪಾರದರ್ಶಿಯಾಗಿಸುವ ಅವಶ್ಯಕತೆಯಿದೆ.

ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ 2016-2022ರ ಮಧ್ಯೆ 16,437 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್​ಗಳನ್ನು ಮಾರಾಟ ಮಾಡಲಾಗಿದೆ. ಈ ದೇಣಿಗೆಗಳ ಪೈಕಿ ಬಿಜೆಪಿ 10,122 ಕೋಟಿ ರೂ. ಸ್ವೀಕರಿಸಿದ್ದರೆ, ಕಾಂಗ್ರೆಸ್ 1,547 ಕೋಟಿ ರೂ., ತೃಣಮೂಲ ಕಾಂಗ್ರೆಸ್ 823 ಕೋಟಿ ರೂ. ಸ್ವೀಕರಿಸಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಇರಬೇಕು. ಬಾಂಡ್​ಗಳು ಹಣದ ಅಕ್ರಮ ವರ್ಗಾವಣೆಗೆ ಕಾರಣವಾಗಬಹುದು ಎಂಬ ಕಳವಳವೂ ವ್ಯಕ್ತವಾಗಿತ್ತು. ಅನಾಮಧೇಯವಾಗಿ ದೇಣಿಗೆ ನೀಡಲು ಅವಕಾಶ ಇದ್ದದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಸುಪ್ರೀಂ ಕೋರ್ಟ್ ಈ ಎಲ್ಲ ಕಳವಳಗಳನ್ನು ಪರಿಗಣಿಸಿಯೇ, ಚುನಾವಣಾ ಬಾಂಡ್​ನ್ನು ರದ್ದುಪಡಿಸಿರುವುದು ಸ್ವಾಗತಾರ್ಹ.