ನ್ಯೂಸ್

'ನಟಿ ಕಂಗನಾಗೆ ನಾವು ಭದ್ರತೆ ಒದಗಿಸುತ್ತೇವೆ...ಅವರು ಧೈರ್ಯವಾಗಿ ಮುಂಬೈಗೆ ತೆರಳಬಹುದು '

ಮುಂಬೈ: ಮುಂಬೈಗೆ ಬರಬೇಡ..ಎಂದು ಹಲವರು ನನ್ನನ್ನು ಹೆದರಿಸುತ್ತಿದ್ದಾರೆ. ಆದರೆ ನಾನು ಸೆಪ್ಟೆಂಬ್​ 9ರಂದು ಮನಾಲಿಯಿಂದ ಮುಂಬೈಗೆ ಬಂದೇ ಬರುತ್ತೇನೆ..ಅದ್ಯಾರಿಗೆ ನನ್ನನ್ನು ತಡೆಯಲು ತಾಕತ್ತಿದೆಯೋ ಅವರು ತಡೆಯಲಿ ಎಂದು ನಟಿ ಕಂಗನಾ ರಣಾವತ್​ ಸವಾಲು ಹಾಕಿದ್ದಾರೆ.

ಅಂಥ ಸವಾಲು ಹಾಕಿದ ನಟಿಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ಅವರು ಬೆಂಬಲ ನೀಡಿದ್ದು, ಕಂಗನಾ ರಣಾವತ್​ ಅವರು ಸೆಪ್ಟೆಂಬರ್​ 9ರಂದು ಮುಂಬೈಗೆ ಭೇಟಿ ನೀಡಲು, ನಮ್ಮ ರಾಜ್ಯ ಸರ್ಕಾರ ಅವರಿಗೆ ಭದ್ರತೆ ಒದಗಿಸಲಿದೆ ಎಂದು ಹೇಳಿದ್ದಾರೆ.

ಕಂಗನಾ ಅವರು ಹಿಮಾಚಲ ಪ್ರದೇಶದ ಮಗಳು. ಹಾಗೇ ಓರ್ವ ಸೆಲೆಬ್ರಿಟಿ ಕೂಡ ಹೌದು. ಅವರಿಗೆ ರಕ್ಷಣೆ ಒದಗಿಸುವುದು ನಮ್ಮ ಕರ್ತವ್ಯ. ನಾನು ಡಿಜಿಪಿ ಸಂಜಯ್​ ಕುಂದು ಅವರೊಂದಿಗೆ ಮಾತನಾಡಿದ್ದೇನೆ. ಕಂಗನಾ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಸುಶಾಂತ್​ ಸಿಂಗ್​ ಮೃತಪಟ್ಟ ಬಳಿಕ ಕಂಗನಾ ರಣಾವತ್​ ಹಲವರ ಕಣ್ಣಲ್ಲಿ ವಿಲನ್​ ಆಗಿದ್ದಾರೆ. ಆದರೆ ಅವರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬೋಲ್ಡ್​ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಈ ಮಧ್ಯೆ ಕಂಗಾನ ಸಹೋದರಿ ರಂಗೋಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ಕರೆ ಮಾಡಿ ಸಹೋದರಿಗೆ ಭದ್ರತೆ ನೀಡಲು ಮನವಿ ಮಾಡಿದ್ದಾರೆ. ಹಾಗೇ, ಕಂಗನಾ ತಂದೆಯೂ ಕೂಡ ಸಿಎಂಗೆ ಲಿಖಿತ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)