ನ್ಯೂಸ್

ರಷ್ಯಾದ ಪ್ರೇಯಸಿ ಜತೆ ಟ್ರಕ್​ನಲ್ಲಿ ಅಡಗಿ ಪ್ರಯಾಣಿಸುತ್ತಿದ್ದ ಯುವಕ; ಊರು ಸ್ವಲ್ಪ ದೂರದಲ್ಲಿದ್ದಾಗ ಟ್ವಿಸ್ಟ್​ ಕೊಟ್ರು ಪೊಲೀಸ್​

ಶಿಮ್ಲಾ: ಕರೊನಾ ಲಾಕ್​ಡೌನ್​ ಇದ್ದುದರಿಂದ ದೂರದ ಪ್ರಯಾಣಗಳಿಗೆ ನಿರ್ಬಂಧ ಹೇರಲಾಗಿದೆ. ಅನುಮತಿ ಇಲ್ಲದೆ ಯಾರೂ ಸಂಚಾರ ಮಾಡುವಂತಿಲ್ಲ.

ಆದರೆ ಈ ಮಧ್ಯೆ ಒಂದಷ್ಟು ಜನರು ಕದ್ದು ಮುಚ್ಚಿ ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಲಾರಿಗಳಲ್ಲಿ ಅಡಗಿ ಕುಳಿತು ಪ್ರಯಾಣ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಈಗ ಹಿಮಾಚಲಪ್ರದೇಶದಲ್ಲಿ ಒಂದು ಜೋಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಕುಲ್ಲು ಜಿಲ್ಲೆಯ ಯುವಕನೋರ್ವ ರಷ್ಯಾದ ಯುವತಿಯೋರ್ವಳ ಜತೆ ಟ್ರಕ್​ನ ಹಿಂದೆ ಅಡಗಿ ಕುಳಿತು ಶಿಮ್ಲಾಕ್ಕೆ ಹೋಗುತ್ತಿದ್ದ.

ಇವರಿಬ್ಬರೂ ಕುಲ್ಲು ಜಿಲ್ಲೆಯ ನಿರ್ಮಾಂಡ್​ ಏರಿಯಾದಲ್ಲಿ ಇದ್ದವರು. ಆದರೆ ಯಾವುದೋ ಕೆಲಸದ ನಿಮಿತ್ತ ನೊಯ್ಡಾಕ್ಕೆ ಹೋಗಿ ಅಲ್ಲಿಯೇ ಸಿಕ್ಕಿಬಿದ್ದಿದ್ದರು. ಈಗ ಈ ಟ್ರಕ್​​ನಲ್ಲಿ ಶಿಮ್ಲಾಕ್ಕೆ ಪ್ರವೇಶಿಸಿ, ಅಲ್ಲಿಂದ ಮತ್ತೆ ನಿರ್ಮಾಂಡ್​ಗೆ ಹೋಗಿ, ನಂತರ ಸಂಪ್ರದಾಯಬದ್ಧವಾಗಿ ಮದುವೆಯಾಗುವ ಯೋಜನೆ ಹಾಕಿಕೊಂಡಿದ್ದರು. ಶೋಘಿ ಬಳಿ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರ ಬಳಿ ಯಾವುದೇ ಪಾಸ್ ಇರಲಿಲ್ಲ. ಹಾಗಾಗಿ ವಶಕ್ಕೆ ಪಡೆದಿದ್ದೇವೆ. ಲಾರಿ ಚಾಲಕ, ಕ್ಲೀನರ್ ಸೇರಿ ನಾಲ್ವರ ವಿರುದ್ಧವೂ ಎಫ್​ಐಆರ್​ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸದ್ಯ ಯುವಕ, ಲಾರಿ ಚಾಲಕ, ಕ್ಲೀನರ್​​ನನ್ನು ಶೋಘಿಯಲ್ಲಿಯೇ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಯುವತಿಯನ್ನು ದೆಹಲಿಗೆ ಕಳಿಸಿ, ಅಲ್ಲಿ ಕ್ವಾರಂಟೈನ್​ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಮದುವೆ ಕನಸು ಕಂಡಿದ್ದ ಜೋಡಿಯ ಪಾಲಿಗೆ ಪೊಲೀಸರು ಹೀಗೆ ಟ್ವಿಸ್ಟ್​ ಕೊಟ್ಟಿದ್ದಾರೆ. (ಏಜೆನ್ಸೀಸ್​)