ನ್ಯೂಸ್

ಇಂಜಿನಿಯರಿಂಗ್ ಶುಲ್ಕ ಶೇ.10 ಏರಿಕೆ; ಮುಂದಿನ ವರ್ಷದಿಂದ ಒಂದೇ ಸಿಇಟಿ

ಬೆಂಗಳೂರು: ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್​ಗಳಿಗೆ ಶೇ.10 ಶುಲ್ಕ ಹೆಚ್ಚಳಕ್ಕೆ ತೀರ್ವನಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ವಿವಿಧ ಕಾರಣಗಳನ್ನು ಮುಂದಿಟ್ಟು ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ (ಕುಪೆಕಾ) ಶೇ.25 ಶುಲ್ಕ ಏರಿಕೆಗೆ ಮನವಿ ಮಾಡಿತ್ತು. ಆದರೆ, ಸಮಿತಿ ವರದಿ ಪ್ರಕಾರ ಶೇ.10ರಷ್ಟು ಏರಿಕೆಗೆ ಅವಕಾಶವಿದೆ ಎಂದು ಮನವರಿಕೆ ಮಾಡಿಕೊಡಲಾಗಿದ್ದು, ಕುಪೆಕಾ ಒಪ್ಪಿಕೊಂಡಿದೆ ಎಂದು ತಿಳಿಸಿದರು. ಇದಲ್ಲದೆ, ಮುಂದಿನ ವರ್ಷದಿಂದ ಕಾಮೆಡ್-ಕೆ ಇರುವುದಿಲ್ಲ. ಸಿಇಟಿಯಲ್ಲಿ ವಿಲೀನಗೊಳಿಸಿ ರಾಷ್ಟ್ರವ್ಯಾಪಿ ಒಂದೇ ಪರೀಕ್ಷೆ ನಡೆಸಲು ಕುಪೆಕಾ ಸಹಮತ ವ್ಯಕ್ತಪಡಿಸಿದೆ ಎಂದು ಮಾಹಿತಿ ನೀಡಿದ್ದಾರೆ. 16, 17ರಂದು ನಡೆಸಲಾಗಿದ್ದ ಸಿಇಟಿ ಸರಿಯುತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದ್ದು, ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಜೂ.25ರೊಳಗೆ ಸಲ್ಲಿಸುವಂತೆ ಸೂಚಿಸಿದೆ.

ಮುಂದಿನ ವರ್ಷದಿಂದ ಒಂದೇ ಸಿಇಟಿ: ಕೆಇಟಿ, ಕಾಮೆಡ್-ಕೆ ಯುಜಿಇಟಿ ವಿಲೀನ 

ಇಂಜಿನಿಯರಿಂಗ್ ಸೇರಿ ವೃತ್ತಿಪರ ವ್ಯಾಸಂಗಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು. ವಿಕಾಸಸೌಧದಲ್ಲಿ ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಕಾಲೇಜುಗಳ ಸಂಘದ (ಕುಪೆಕಾ) ಪ್ರತಿನಿಧಿಗಳೊಂದಿಗೆ ಬುಧವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕಾಮೆಡ್-ಕೆ ಯುಜಿಇಟಿ ಪ್ರತ್ಯೇಕವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿಕೊಂಡು ಬಂದಿವೆ. ಎರಡನ್ನೂ ವಿಲೀನಗೊಳಿಸಿ ಒಂದೇ ಸಿಇಟಿ ನಡೆಸುವುದಕ್ಕೆ ಕುಪೆಕಾ ಸಹಮತ ವ್ಯಕ್ತಪಡಿಸಿದೆ. ವಿಲೀನ ವಿಧಿ-ವಿಧಾನ, ಒಂದೇ ಪರೀಕ್ಷೆ ವಿಧಾನ, ಪರಸ್ಪರ ತಿಳಿವಳಿಕೆ ಪತ್ರ ಸಿದ್ಧತೆ ಮುಂತಾದ ಪೂರ್ವಭಾವಿ ಪ್ರಕ್ರಿಯೆಗಳನ್ನು ಇಲಾಖೆ ನಿರ್ವಹಿಸಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಒಂದೇ ಸಿಇಟಿ ಜಾರಿಯಾಗಲಿದೆ. ಒಂದೇ ಸಿಇಟಿ ನಡೆಸಿದರೂ ಪ್ರಸಕ್ತ ಚಾಲ್ತಿಯಲ್ಲಿರುವ ಸೀಟುಗಳ ಹಂಚಿಕೆ ಹಾಗೂ ವಿದ್ಯಾರ್ಥಿಗಳ ಪ್ರವೇಶಕ್ಕೆ ರ‍್ಯಾಂಕಿಂಗ್ ಅರ್ಹತೆ ಮುಂದುವರಿಯಲಿದೆ ಎಂದು ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಶುಲ್ಕ ಹೆಚ್ಚಳ: ಎರಡು ವರ್ಷಗಳ ಬಳಿಕ ಇಂಜಿನಿಯರಿಂಗ್ ವ್ಯಾಸಂಗ ಶುಲ್ಕ ಶೇ.10 ಹೆಚ್ಚಳಕ್ಕೆ ನಿರ್ಧರಿಸಿದ್ದು, ಪ್ರಸಸಕ್ತ ಶೈಕ್ಷಣಿಕ ವರ್ಷ (2022-23)ದಿಂದ ಪರಿಷ್ಕೃತ ಶುಲ್ಕ ಅನುಷ್ಠಾನಕ್ಕೆ ಬರಲಿದೆ. ಶೇ.25 ಶುಲ್ಕ ಏರಿಕೆಗೆ ಕುಪೆಕಾ ಮನವಿ ಮಾಡಿತು. ಆದರೆ ಸಮಿತಿ ವರದಿ ಪ್ರಕಾರ ಶೇ.10 ಏರಿಕೆಗೆ ಅವಕಾಶವಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದು, ಕುಪೆಕಾ ಒಪ್ಪಿಕೊಂಡಿದೆ. ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳಿಗೆ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ. ನಿಗದಿತ ಶುಲ್ಕ ಹೊರತುಪಡಿಸಿ ಇತರ ಶುಲ್ಕ ವಸೂಲಿ ಮಾಡುವುದಿಲ್ಲ ಎಂದು ಕುಪೆಕಾ ಒಪ್ಪಿದ್ದು, ಇತರ ಶುಲ್ಕ ವಸೂಲಿ ದೃಢಪಟ್ಟರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಕ್ಕೂ ಸಹಮತ ವ್ಯಕ್ತಪಡಿಸಿದೆ ಎಂದು ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕುಪೇಕಾ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಇತರರು ಇದ್ದರು.