ನ್ಯೂಸ್

ಕರ್ನಾಟಕ ಬಳಿಕ ಉತ್ತರ ಪ್ರದೇಶದಲ್ಲಿ ಹಿಜಾಬ್​ ವಿವಾದ! ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ನೋ ಎಂಟ್ರಿ

ಮೊರಾದಬಾದ್​: ಕಳೆದ ವರ್ಷ ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಬಳಿಕ ತಣ್ಣಗಾಗಿದ್ದ ಹಿಜಾಬ್​ ವಿವಾದ ಇದೀಗ ಉತ್ತರ ಪ್ರದೇಶದಲ್ಲಿ ಶುರುವಾಗಿದೆ. ಮೊರದಾಬಾದ್​ನಲ್ಲಿರುವ ಹಿಂದು ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಸಮವಸ್ತ್ರ ಸಂಹಿತೆ ಜಾರಿಯಲ್ಲಿದ್ದರೂ ಬುರ್ಖಾ ಧರಿಸಿ ಬಂದಿದ್ದಕ್ಕೆ ಅವರಿಗೆ ಪ್ರವೇಶವನ್ನು ನಿರಾಕರಿಸಲಾಯಿತು.

ನಾವು ಬುರ್ಖಾ ಧರಿಸಿ ಬಂದಿದ್ದಕ್ಕೆ ಕಾಲೇಜಿನ ಸಿಬ್ಬಂದಿ ನಮ್ಮನ್ನು ಒಳಗೆ ಬಿಡಲಿಲ್ಲ ಎಂದು ಆರೋಪ ಮಾಡಿರುವ ವಿದ್ಯಾರ್ಥಿನಿಯರು, ಬುರ್ಖಾ ಬಿಚ್ಚಿಟ್ಟು ಒಳಗೆ ಬರುವಂತೆ ನಮ್ಮನ್ನು ಒತ್ತಾಯಿಸಿದರು ಎಂದಿದ್ದಾರೆ. ಇದೇ ವಿಚಾರಕ್ಕೆ ವಿದ್ಯಾರ್ಥಿನಿಯರು, ಸಮಾಜವಾದಿ ಛತ್ರ ಸಭಾ ಕಾರ್ಯಕರ್ತರು ಮತ್ತು ಕಾಲೇಜು ಪ್ರಾಧ್ಯಪಕರ ನಡುವೆ ವಾಗ್ವಾದ ನಡೆಯಿತು. ಪಾಧ್ಯಪಕರು ಮಾತ್ರ ಕಾಲೇಜಿನ ನಿಯಮಗಳಿಗೆ ಅಂಟಿಕೊಂಡಿದ್ದರು. ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಿಲ್ಲ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಘಟನೆಯ ಬಗ್ಗೆ ಮಾತನಾಡಿರುವ ಕಾಲೇಜು ಪ್ರಾಧ್ಯಪಕ ಡಾ. ಎ.ಪಿ. ಸಿಂಗ್​, ನಾವು ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆಯನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಯಾರೇ ಆಗಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಂಡರೆ, ಯಾವುದೇ ಕಾರಣಕ್ಕೂ ಕಾಲೇಜಿನ ಒಳಗೆ ಸೇರಿಸುವುದಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ಸಮಾಜವಾದಿ ಛಾತ್ರ ಸಭಾದ ಸದಸ್ಯರು ಕಾಲೇಜಿನ ವಸ್ತ್ರ ಸಂಹಿತೆಯಲ್ಲೇ ಬುರ್ಖಾವನ್ನು ಸೇರಿಸಲು ಮತ್ತು ವಿದ್ಯಾರ್ಥಿನಿಯರು ತಮ್ಮ ತರಗತಿಗಳಿಗೆ ಹಾಜರಾಗಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ತೀರ್ಮಾನವನ್ನು ಈವರೆಗೂ ಮಾಡಿಲ್ಲ.

ಕಳೆದ ವರ್ಷ ಜನವರಿಯಲ್ಲಿ ಇದೇ ರೀತಿಯ ಘಟನೆ ಕರ್ನಾಟಕದಲ್ಲಿ ನಡೆದಿತ್ತು. ಉಡುಪಿಯ ಹುಡುಗಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿವಾದ ಆರಂಭವಾಯಿತು. ಒಂದು ಕಾಲೇಜಿನಲ್ಲಿ ಉಂಟಾದ ವಿವಾದ ಇಡೀ ರಾಜ್ಯಕ್ಕೆ ಹರಡಿ, ಭಾರಿ ಪ್ರತಿಭಟನೆಗಳು ನಡೆದವು. ಪರ-ವಿರೋಧ ಚರ್ಚೆಗಳಾದವು. ಇದರ ನಡುವೆ ರಾಜ್ಯ ಸರ್ಕಾರ ಸಮವಸ್ತ್ರ ಸಂಹಿತೆಯನ್ನು ಜಾರಿ ಮಾಡುವ ಮೂಲಕ ವಿವಾದವನ್ನು ತಣ್ಣಗಾಗಿಸಲು ಯತ್ನಿಸಿತು. ಆದರೆ, ಸರ್ಕಾರದ ಆದೇಶವನ್ನು ಪ್ರಶ್ನಿಸಿ, ಅನ್ಯ ಧರ್ಮದ ಕೆಲ ವಿದ್ಯಾರ್ಥಿನಿಯರು ಹೈಕೋರ್ಟ್​ ಮೆಟ್ಟಿಲೇರಿದರು. ಆದರೆ, ಹೈಕೋರ್ಟ್​ ಸರ್ಕಾರದ ಆದೇಶವನ್ನು ಎತ್ತಿ ಹಿಡಿಯಿತು. ಬಳಿಕ ವಿದ್ಯಾರ್ಥಿನಿಯರು ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದರು.

ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಕಳೆದ ವರ್ಷ ಅಕ್ಟೋಬರ್​ 13ರಂದು ಭಿನ್ನ ತೀರ್ಪು ನೀಡಿತು. ಓರ್ವ ನ್ಯಾಯಮೂರ್ತಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿಯನ್ನು ವಜಾಗೊಳಿಸಿದರೆ, ಇನ್ನೊರ್ವರು ಹೈಕೋರ್ಟ್​ ಆದೇಶವನ್ನೇ ರದ್ದು ಮಾಡಿದರು. ಇದೀಗ ಹಿಜಾಬ್​ ಪ್ರಕರಣವನ್ನು ಸಿಜೆಐ ಪೀಠಕ್ಕೆ ವರ್ಗಾಯಿಸಲಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿಯನ್ನು ಹೇಮಂತ್​ ಗುಪ್ತಾ ವಜಾಗೊಳಸಿದರೆ, ಮತ್ತೋರ್ವ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹಿಬಾಜ್​ ಬ್ಯಾನ್​ ಮಾಡಿ ಹೈಕೋರ್ಟ್​ ಹೊರಡಿಸಿದ್ದ ಆದೇಶವನ್ನೇ ರದ್ದು ಮಾಡಿದರು. (ಏಜೆನ್ಸೀಸ್​)