ಬೆಂಗಳೂರು: ಸದ್ಯ ಚಾಲ್ತಿಯಲ್ಲಿರುವ ಸ್ಮಾರ್ಟ್ ಕಾರ್ಡ್ ಆಧಾರಿತ ವಾಹನ ನೋಂದಣಿ ಪ್ರಮಾಣಪತ್ರ (ಆರ್ಸಿ) ವಿತರಣೆ ವ್ಯವಸ್ಥೆಯನ್ನು ಡೀಲರ್ವುಟ್ಟದಲ್ಲಿ ಹೊಸ ವಾಹನಗಳ ಆನ್ಲೈನ್ ನೋಂದಣಿಯಲ್ಲಿಯೂ ಮುಂದುವರಿಸ ಬಹುದೇ ಎನ್ನುವುದನ್ನು ಸ್ಪಷ್ಟಪಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 33ಕ್ಕೆ ತಿದ್ದುಪಡಿ ತಂದು, ಹೊಸ ವಾಹನಗಳಿಗೆ ಡೀಲರ್ ಮಟ್ಟದಲ್ಲೇ ಎಲೆಕ್ಟ್ರಾನಿಕ್ ಅಥವಾ ಆನ್ಲೈನ್ ಮೂಲಕ ಆರ್ಸಿ ವಿತರಿಸುವ ಸಂಬಂಧ 2021ರ ಅ.31ರಂದು ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ, ಸ್ಮಾರ್ಟ್ ಕಾರ್ಡ್ ಆಧಾರಿತ ಆರ್ಸಿ ವಿತರಣಾ ಸಂಸ್ಥೆಯಾದ ರೊಸ್ಮೆರ್ಟಾ ಟೆಕ್ನಾಲಜೀಸ್ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು.
ಇದಕ್ಕೂ ಮುನ್ನ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಹಾಜರಾಗಿ, ಅ.31ರ ಅಧಿಸೂಚನೆಗೂ ಮೊದಲು ಜಾರಿಯಲ್ಲಿದ್ದ ವ್ಯವಸ್ಥೆಯಂತೆಯೇ ಆರ್ಸಿ ವಿತರಿಸಬೇಕೆಂದು ಕಳೆದ ಡಿ.7ರಂದು ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಆ ಆದೇಶ ತೆರವಿಗೆ ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ ಎಂದು ತಿಳಿಸಿದರು. ಅರ್ಜಿದಾರ ಸಂಸ್ಥೆಯ ಪರ ಹಿರಿಯ ವಕೀಲ ಸಜನ್ ಪೂವಯ್ಯ, ಸ್ಮಾರ್ಟ್ ಕಾರ್ಡ್ ಆಧಾರಿತ ಆರ್ಸಿ ವಿತರಿಸಲು ಸರ್ಕಾರ ನಮ್ಮೊಂದಿಗೆ 15 ವರ್ಷಗಳ ಕನ್ಸೆಷನ್ ಅಗ್ರಿಮೆಂಟ್ (ವಿನಾಯಿತಿ ಒಪ್ಪಂದ) ಮಾಡಿಕೊಂಡಿದೆ. ಆ ಒಪ್ಪಂದ 2024ರ ವರೆಗೆ ಜಾರಿಯಲ್ಲಿರಲಿದೆ. ಈ ವಿಚಾರವನ್ನು ಪರಿಗಣಿಸಿಯೇ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ವಾದ-ಪ್ರತಿವಾದ ಆಲಿಸಿದ ಪೀಠ, ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಮುಂದುವರಿಸಬಹುದೇ, ಡೀಲರ್ವುಟ್ಟದಲ್ಲಿ ನಡೆಸುವ ಆನ್ಲೈನ್ ನೋಂದಣಿಯಲ್ಲೂ ಸ್ಮಾರ್ಟ್ ಕಾರ್ಡ್ ವಿತರಿಸಬಹುದೇ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿದರೆ ಅರ್ಜಿಯನ್ನೇ ಇತ್ಯರ್ಥಪಡಿಸಬಹುದು ಎಂದು ಹೇಳಿತು. ಈ ಕುರಿತು ಮಾಹಿತಿ ಪಡೆದು ತಿಳಿಸಲಾಗುವುದು ಎಂದು ಎಎಜಿ ಹೇಳಿದರು. ಅದನ್ನು ಪರಿಗಣಿಸಿದ ಪೀಠ ವಿಚಾರಣೆಯನ್ನು ಫೆ.28ಕ್ಕೆ ಮುಂದೂಡಿತು.