ಬೆಂಗಳೂರು: ಕ್ರಿಮಿನಲ್ ಪ್ರಕರಣಗಳಿಂದ ಖುಲಾಸೆಯಾಗಿ ನಿರಾಳರಾಗಿದ್ದ ಜನಪ್ರತಿನಿಧಿಗಳಿಗೆ ಹೈಕೋರ್ಟ್ ಶಾಕ್ ಕೊಟ್ಟಿದೆ. ರಾಜ್ಯದ ಮಾಜಿ-ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು 2020ರ ಸೆ.16ರ ನಂತರ ಹೊರಡಿಸಿರುವ ಎಲ್ಲ ಆದೇಶಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಸರ್ಕಾರಕ್ಕೆ ಹೈಕೋರ್ಟ್ ಮತ್ತೆ ಒಂದು ವಾರ ಕಾಲಾವಕಾಶ ನೀಡಿದೆ.
ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ ‘ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಆಯಾ ರಾಜ್ಯಗಳ ಹೈಕೋರ್ಟ್ ಅನುಮತಿ ಇಲ್ಲದೇ ಸರ್ಕಾರಗಳು ಹಿಂಪಡೆಯುವಂತಿಲ್ಲ’ ಎಂದು ಆ.10ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದರಿಂದ, ರಾಜ್ಯದ ಮಾಜಿ-ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು ಸರ್ಕಾರ ಹೊರಡಿಸಿರುವ ಆದೇಶಗಳ ಪರಿಶೀಲನೆಗೆ ಮುಂದಾಗಿದ್ದ ಹೈಕೋರ್ಟ್, 2020ರ ಸೆ.16ರ ನಂತರ ಹೊರಡಿಸಿರುವ ಎಲ್ಲ ಆದೇಶಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಆ.16ರಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.
ಅರ್ಜಿಯು ಗುರುವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಪ್ರಕರಣದ ಅಮಿಕಸ್ ಕ್ಯೂರಿಯಾದ ಹಿರಿಯ ವಕೀಲ ಆದಿತ್ಯ ಸೋಂಧಿ, ಆಯಾ ರಾಜ್ಯಗಳ ಹೈಕೋರ್ಟ್ ಅನುಮತಿ ಪಡೆಯದೇ ಜನ ಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ಹಿಂಪಡೆಯುವಂತಿಲ್ಲ. ಈ ಕುರಿತು ಹೈಕೋರ್ಟ್ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು, ಹಿಂಪಡೆದ ಪ್ರಕರಣಗಳ ಪರಿಶೀಲನೆ ನಡೆಸಬಹುದು, ಸಂಬಂಧಪಟ್ಟ ದಾಖಲೆಗಳನ್ನು ಸರ್ಕಾರದಿಂದ ಪಡೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ, ದಾಖಲೆಗಳನ್ನು ಒದಗಿಸಲು ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಬಹುದು ಎಂದು ತಿಳಿಸಿದರು.
ತೀರ್ಪಿಗೆ ಬದ್ಧವಿರಬೇಕು: ರಾಜ್ಯದಲ್ಲಿ ಜನಪ್ರತಿನಿಧಿಗಳು ಮತ್ತವರ ಬೆಂಬಲಿಗರು, ಸಹಚರರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಟ್ಟು ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿ ಪಿಯುಸಿಎಲ್ ಹಾಗೂ ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಅರ್ಜಿಗಳನ್ನು ಆ.11ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಾಜಿ-ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಆಯಾ ರಾಜ್ಯಗಳ ಹೈಕೋರ್ಟ್ ಅನುಮತಿ ಇಲ್ಲದೆ ಹಿಂಪಡೆಯುವಂತಿಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ರಾಜ್ಯ ಸರ್ಕಾರವೂ ಬದ್ಧವಾಗಿರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.
ಕಾಲಾವಕಾಶ ಕೋರಿದ ಸರ್ಕಾರ: ಹಿಂಪಡೆದ ಪ್ರಕರಣಗಳ ವಿವರ ಹಾಗೂ ದಾಖಲೆಗಳನ್ನು ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಬೇಕು ಎಂದು ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲರು ಮನವಿ ಮಾಡಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ರಾಜ್ಯದಲ್ಲಿ 2020ರ ಸೆ.16ರ ನಂತರ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು ಹೊರಡಿಸಿ ರುವ ಎಲ್ಲ ಆದೇಶಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಆ.31ರೊಳಗೆ ಒದಗಿಸಬೇಕು ಎಂದು ಆ.16ರಂದು ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. ಆದರೆ, ಸರ್ಕಾರ ಮತ್ತೆ ಒಂದು ವಾರ ಕಾಲಾವಕಾಶ ಕೇಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿತು. ಅಂತಿಮವಾಗಿ, ಸರ್ಕಾರಕ್ಕೆ ಒಂದು ವಾರ ಕಾಲಾವಕಾಶ ನೀಡಿದ ಪೀಠ, ಆ.16ರಂದು ನೀಡಿರುವ ನಿರ್ದೇಶನದಂತೆ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು ಹೊರಡಿಸಲಾಗಿರುವ ಆದೇಶಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು ಎಂದು ಸಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.