ನ್ಯೂಸ್

ಬಿಜೆಪಿಯಿಂದ ಗೆದ್ದು ಟಿಎಂಸಿಗೆ ಪಕ್ಷಾಂತರ; 4 ವರ್ಷದ ಬಳಿಕ ಮುಕುಲ್ ರಾಯ್ ಶಾಸಕ ಸ್ಥಾನ ರದ್ದುಗೊಳಿಸಿದ ಹೈಕೋರ್ಟ್​| Mukul Roy

ಕೋಲ್ಕತ್ತಾ: 2021ರಲ್ಲಿ ಬಿಜೆಪಿಯಿಂದ ಗೆದ್ದು ಒಂದು ತಿಂಗಳಲ್ಲೇ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದ ಸಿಎಂ ಮಮತಾ ಬ್ಯಾನರ್ಜಿಯವರ ಆಪ್ತ ಮುಕುಲ್ ರಾಯ್(Mukul Roy) ಅವರ ಪಶ್ಚಿಮ ಬಂಗಾಳ ವಿಧಾನಸಭೆ ಸದಸ್ಯತ್ವವನ್ನು ನಾಲ್ಕು ವರ್ಷಗಳ ಬಳಿಕ ಇಂದು(ನ. 13) ಕೋಲ್ಕತ್ತಾ ಹೈಕೋರ್ಟ್ ರದ್ದು ಮಾಡಿದೆ ಎಂದು ವರದಿಯಾಗಿದೆ.

ನಾಡಿಯಾ ಜಿಲ್ಲೆಯ ಕೃಷ್ಣನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ರಾಯ್, ಚುನಾವಣೆಯ ನಡೆದ ಒಂದು ತಿಂಗಳೊಳಗೆ ತಮ್ಮ ಹಿಂದಿನ ಪಕ್ಷವಾದ ತೃಣಮೂಲ ಕಾಂಗ್ರೆಸ್‌ ಸೇರಿದ್ದರು. ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಬಳಿಕ ರಾಯ್ ಪಕ್ಷದಲ್ಲಿ ಎರಡನೇ ಸ್ಥಾನದಲ್ಲಿದ್ದರು.

ಬಂಗಾಳ ವಿಧಾನಸಭೆಯ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಮುಕುಲ್ ರಾಯ್ ಅವರನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದರು. ಸಾಮಾನ್ಯವಾಗಿ ಆ ಸ್ಥಾನವನ್ನು ವಿರೋಧ ಪಕ್ಷದ ನಾಯಕರಿಗೆ ನೀಡಲಾಗುತ್ತೆ. ಅದನ್ನು ಪ್ರಶ್ನಿಸಿ ನೇಮಕವನ್ನು ರದ್ದುಗೊಳಿಸುವಂತೆ ಕೋರಿದ್ದ ಮನವಿಯನ್ನು ಸ್ಪೀಕರ್, ರಾಯ್ ಬಿಜೆಪಿ ಸದಸ್ಯರು ಎಂದು ತಿರಸ್ಕರಿಸಿದ್ದರು.

ಈ ನಿರ್ಧಾರವನ್ನು ಪ್ರಶ್ನಿಸಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುದೀರ್ಘವಾಗಿ ವಿಚಾರಣೆ ನಡೆದು ಇಂದು ಹೈಕೋರ್ಟ್​ ಸ್ಪೀಕರ್ ನಿರ್ಧಾರವನ್ನು ರದ್ದುಗೊಳಿಸಿ, ಪಕ್ಷಾಂತರ ಕಾಯ್ದೆಯಡಿ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಿ ಆದೇಶ ನೀಡಿದೆ. (ಏಜೆನ್ಸೀಸ್)