ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರವು ಭಾರತಕ್ಕೆ ಬಂದಿರುವ ಅತಿಥಿಗಳಿಂದ ವಾಸ್ತವಾಂಶವನ್ನು ಮರೆಮಾಚಿ ಜಿ-20 ಶೃಂಗಸಭೆಯನ್ನು ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜಿ-20 ಶೃಂಗಸಭೆ ಹಿನ್ನಲೆಯಲ್ಲಿ ದೆಹಲಿ ನಗರದ ಕೊಳಗೇರಿ ಪ್ರದೇಶಗಳನ್ನು ಕಾಣದಂತೆ ಪರದೆ ಕಟ್ಟಿ ಮುಚ್ಚಲಾಗಿದೆ. ಬಡ ಜನರನ್ನು ಏಕೆ ಮರೆಮಾಚುತ್ತಿದ್ದೀರಿ ಪ್ರಧಾನಿಯವರೇ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ರಾಹುಲ್ ಭಾರತ ಸರ್ಕಾರವು ಬಡವರು ಹಾಗೂ ಪ್ರಾಣಿಗಳನ್ನು ಯಾರ ಕಣ್ಣಿಗೆ ಕಾಣದಂತೆ ಮರೆಮಾಚಿದೆ. ಭಾರತಕ್ಕೆ ಬಂದಿರುವ ಅತಿಥಿಗಳಿಂದ ವಾಸ್ತವಾಂಶವನ್ನು ಮರೆಮಾಚುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಜಿ-20 ಶೃಂಗಸಭೆಯಿಂದ ರಷ್ಯಾದ ಅಧ್ಯಕ್ಷ ದೂರ ಉಳಿದಿರಬಹುದು. ಆದರೆ, ಪ್ರಿನ್ಸ್ ಪೊಟೆಮ್ಕಿನ್ (ಪ್ರಧಾನಿ ಮೋದಿ) ಮಾತ್ರ ಕೊಳಗೇರಿ ಪ್ರದೇಶಗಳನ್ನು ಮರೆಮಾಚಿ ತಮ್ಮನ್ನು ಪ್ರದರ್ಶಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಪ್ರಧಾನಿ ತಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ಪ್ರಾಣಿಗಳನ್ನು ಕ್ರೂರವಾಗಿ ಹಿಂಸಿಸಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.