ನ್ಯೂಸ್

ರೈತರ ಪ್ರತಿಭಟನೆಯಿಂದ ವ್ಯಾಪಾರ-ವಹಿವಾಟಿಗೆ ಆಗಿರುವ ನಷ್ಟ ಎಷ್ಟು ಗೊತ್ತೇ?

ನವದೆಹಲಿ: ಯಾವುದೇ ಮುಷ್ಕರ-ಬಂದ್ ನಡೆದರೂ ವ್ಯಾವಹಾರಿಕವಾಗಿ ದೊಡ್ಡ ಪ್ರಮಾಣದಲ್ಲೇ ನಷ್ಟ ಉಂಟಾಗುತ್ತದೆ. ಅಂಥದ್ದೇ ಒಂದು ಬೃಹತ್ ವ್ಯಾವಹಾರಿಕ ನಷ್ಟ ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದ ಆಗಿರುವುದು ಈಗ ಬೆಳಕಿಗೆ ಬಂದಿದೆ. ಈ ಬಗ್ಗೆ ಟ್ರೇಡ್​ ಯೂನಿಯನ್​ವೊಂದು ಮಾಹಿತಿ ಹೊರಹಾಕಿದೆ.

ದೆಹಲಿಯ-ಎನ್​ಸಿಆರ್ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದ ಆಗಿರುವ ವ್ಯಾವಹಾರಿಕ ನಷ್ಟದ ಕುರಿತ ಮಾಹಿತಿಯನ್ನು ಕಾನ್​ಫೆಡರೇಷನ್​ ಆಫ್​ ಆಲ್​ ಇಂಡಿಯಾ ಟ್ರೇಡರ್ಸ್​ (ಸಿಎಐಟಿ) ಬಹಿರಂಗಪಡಿಸಿದೆ. ರೈತರ ಪ್ರತಿಭಟನೆಯಿಂದ ವ್ಯಾಪಾರ ಕ್ಷೇತ್ರದಲ್ಲಿ 50 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್​ವಾಲ್​ ಹೇಳಿದ್ದಾರೆ.

ಈಗಾಗಲೇ ಭಾರಿ ನಷ್ಟ ಉಂಟಾಗಿರುವುದರಿಂದ ನಾವು ಕೃಷಿ ಕಾಯ್ದೆ ಕುರಿತು ಸರ್ಕಾರ ಕೊಟ್ಟಿರುವ ಹೊಸ ಪ್ರಸ್ತಾವನೆಯನ್ನು ರೈತರ ದೊಡ್ಡ ಸಮುದಾಯದ ಹಿತಾಸಕ್ತಿಗಾಗಿ ಒಪ್ಪುವುದು ಒಳ್ಳೆಯದು. ಒಪ್ಪದಿದ್ದರೆ ರೈತರಿಗೆ ಪರಿಹಾರದ ಬಗ್ಗೆ ಆಸಕ್ತಿ ಇಲ್ಲ ಎಂಬ ಸಂದೇಶ ರವಾನೆ ಆಗುತ್ತದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)