Hema Malini: ಅದು 20ರ ದಶಕ. ಬಾಲಿವುಡ್ ಅಂಗಳದಲ್ಲಿ ತಮ್ಮ ಸಿನಿಮಾಗಳ ಮೂಲಕವೇ ಭಾರೀ ಸದ್ದು ಮಾಡುತ್ತಿದ್ದ ನಟಿ ಎಂದರೆ ಅದು ಹೇಮಾ ಮಾಲಿನಿ. ಸಿನಿರಸಿಕರ ನೆಚ್ಚಿನ ನಟಿಯಾಗಿ ಮಿಂಚಿದ ಹೇಮಾ, ಪ್ರಸ್ತುತ ಚಿತ್ರರಂಗವನ್ನು ತೊರೆದು ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಆದರೂ ಸಹ ಅವರ ಅಭಿಮಾನಿಗಳ ಮನದಲ್ಲಿ ಇಂದಿಗೂ ಸ್ಟಾರ್ ಬ್ಯೂಟಿಯಾಗಿ ಉಳಿದಿರುವ ಹೇಮಾ ಮಾಲಿನಿ, ಹಿಂದಿ ಚಿತ್ರಗಳಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳಲಿ ಎಂಬುದು ಅವರ ಅಭಿಮಾನಿಗಳ ಆಶಯ. ಆದ್ರೆ, ಇದು ಸದ್ಯ ದೂರದ ಮಾತಾಗಿ ಉಳಿದಿದೆ.
ಸದ್ಯ ರಾಜಕೀಯ ಕೆಲಸಗಳಲ್ಲಿ ಸಖತ್ ಬಿಜಿಯಾಗಿರುವ ಹೇಮಾ ಮಾಲಿನಿ, ಆಗಾಗ್ಗೆ ಜಾಲತಾಣಗಳಲ್ಲಿ ತಮ್ಮ ಹೇಳಿಕೆಗಳಿಂದ ಸದ್ದು ಮಾಡುತ್ತಿರುತ್ತಾರೆ. ಆದರೆ, ಈ ಬಾರಿ ಅವರು ನಟಿಸಿದ ಹಳೆಯ ಚಿತ್ರವೊಂದರ ಚಿತ್ರೀಕರಣದಲ್ಲಿ ನಡೆದ ಒಂದು ಕುತೂಹಲಕಾರಿ ವಿಷಯ ಸದ್ಯ ಅಭಿಮಾನಿಗಳನ್ನು ಹುಬ್ಬೇರಿಸಿದೆ. ಅಸಲಿಗೆ ಈ ಮಾಹಿತಿಯನ್ನು ಹೇಮಾ ಮಾಲಿನಿ ಹಂಚಿಕೊಂಡಿಲ್ಲ. ಅವರ ಬದಲಿಗೆ ನಿರ್ದೇಶಕ ರವಿ ಚೋಪ್ರಾ ಅವರ ಪತ್ನಿ ರೇಣು ಚೋಪ್ರಾ ಬಹಿರಂಗಪಡಿಸಿದ್ದಾರೆ.
2003ರಲ್ಲಿ ರಿಲೀಸ್ ಆದ 'ಬಾಗ್ಬನ್' ಚಿತ್ರದಲ್ಲಿ ಬಾಲಿವುಡ್ ದಿಗ್ಗಜ ನಟ ಅಮಿತಾಭ್ ಬಚ್ಚನ್ ಮತ್ತು ಹೇಮಾ ಮಾಲಿನಿ ಪತಿ-ಪತ್ನಿ ಆಗಿ ನಟಿಸಿದ್ದಾರೆ. ಈ ಚಿತ್ರವು ಅಂದಿನ ಮಟ್ಟಕ್ಕೆ ಯಶಸ್ವಿಯಾಯಿತು. ಬ್ಲಾಕ್ಬಸ್ಟರ್ ಹಿಟ್ ಅನ್ನೋದಕ್ಕಿಂತ ಚಿತ್ರದಲ್ಲಿ ಹಿರಿಯ ದಂಪತಿಗಳಾಗಿ ಕಾಣಿಸಿಕೊಂಡ ಅಮಿತಾಬ್ ಮತ್ತು ಹೇಮಾ ಪಾತ್ರ, ನೋಡುಗರ ಗಮನವನ್ನು ಸೆಳೆಯಿತು. ರಾಜ್ ಮತ್ತು ಪೂಜಾ ಪಾತ್ರದಲ್ಲಿ ಸಿನಿರಸಿಕರ ಮನದಂಗಳದ ಭಾವವನ್ನು ಬಡಿದೆಬ್ಬಿಸಿದ ಬಚ್ಚನ್ ಮತ್ತು ಮಾಲಿನಿ ಜೋಡಿ, ಹಿಂದಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು.
ಇನ್ನು ಈ ಚಿತ್ರದ ಚಿತ್ರೀಕರಣದಲ್ಲಿ ಬರುವ ಒಂದು ಸನ್ನಿವೇಶಕ್ಕಾಗಿ ಹೇಮಾ ಮಾಲಿನಿ ತಯಾರಾದ ರೀತಿ ಮತ್ತು ಅವರು ಹೇಳಿದ ಮಾತನ್ನು ಇದೀಗ ರೇಣು ಚೋಪ್ರಾ ಕಡೆಗೂ ಬಹಿರಂಗಪಡಿಸಿದ್ದಾರೆ. ಇಲ್ಲಿಯವರೆಗೂ ಎಲ್ಲಿಯೂ ಹಂಚಿಕೊಳ್ಳದ ವಿಷಯವನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟ ರೇಣು, "ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸುತ್ತಿದ್ದೇನೆ ಎಂಬ ವಿಷಯ ಹೇಮಾ ಅವರಲ್ಲಿನ ಉತ್ಸಾಹವನ್ನು ಹೆಚ್ಚಿಸಿತ್ತು. ಇದೇ ವಿಷಯಕ್ಕೆ ಆ ಪ್ರಾಜೆಕ್ಟ್ನಲ್ಲಿ ಅವರು ಬಹಳ ಆಳವಾಗಿ ತೊಡಗಿದ್ದರು. ಪಾತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಲ್ಲದೆ, ರಾಜ್ ಮತ್ತು ಪೂಜಾ ಅವರ ಸಂಬಂಧದ ಚಿತ್ರಣವನ್ನು ಹೆಚ್ಚಿಸಲು ಬೇಕಾದ ಸಲಹೆಗಳನ್ನು ಆಗಾಗ್ಗೆ ನಮ್ಮೊಂದಿಗೆ ಚರ್ಚಿಸುತ್ತಿದ್ದರು" ಎಂದು ಹೇಳಿದರು.
"ಚಿತ್ರದಲ್ಲಿ ಹೇಮಾ ಕನ್ನಡಿಯ ಮುಂದೆ ನಿಂತು ಸಿದ್ಧರಾಗುವ ದೃಶ್ಯವಿತ್ತು. ಆ ಸಮಯದಲ್ಲಿ, ರಾಜ್ ಹಿಂದಿನಿಂದ ಬಂದು ಅವಳನ್ನು ನೋಡಿ 'ವಾವ್' ಎಂದೇಳುವ ಡೈಲಾಗ್ ಇತ್ತು. ಈ ಸನ್ನಿವೇಶಕ್ಕಾಗಿ ತಯಾರಾಗುತ್ತಿದ್ದ ಹೇಮಾ ಮಾಲಿನಿ, ಅಮಿತ್ ಜೀ ಬಂದಾಗ, ಅವರು ಹಿಂಬದಿಯಿಂದ ಬಂದು ನನ್ನನ್ನು ಹಿಡಿದಾಗ ಆ ಸ್ಪರ್ಶ ನನಗೆ ತಿಳಿಯಬೇಕು. ನೋಡುಗರಿಗೆ ಆ ಭಾವನೆ ಕಾಣಬೇಕು. ಇದಕ್ಕಾಗಿ ನೀವು ನನ್ನ ಬ್ಲೌಸ್ ಅನ್ನು ಸ್ವಲ್ಪ ಟೈಟ್ ಆಗಿ ಹೊಲಿಯಿರಿ" ಎಂದು ಹೇಳಿದ್ದರಂತೆ.
"ಅಮಿತಾಬ್ ಅವರ ಆ ಸ್ಪರ್ಶ ನನಗೆ ಬೇಕಾದ ಲುಕ್ ನೀಡುತ್ತದೆ. ಅವರು ನನ್ನನ್ನು ಮುಟ್ಟಿದ್ದಾರೆ. ಅದು ಮದುವೆಯಾಗಿ ಹಲವು ವರ್ಷಗಳ ನಂತರ ಎಂಬ ಭಾವನೆಯನ್ನು ತುಂಬಾ ಅರ್ಥಪೂರ್ಣವಾಗಿಸುತ್ತದೆ ಎಂದು ತಿಳಿಸಿದರು. ಕೇವಲ ಬೆಳ್ಳಿ ಪರದೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಹೇಮಾ ಮಾಲಿನಿ ತುಂಬಾ ರೋಮ್ಯಾಂಟಿಕ್ ವ್ಯಕ್ತಿ" ಎಂದು ರೇಣು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಕುತೂಹಲಕಾರಿ ವಿಷಯ ನಟಿಯ ಅಭಿಮಾನಿಗಳ ಹುಬ್ಬೇರಿಸಿದ್ದು, ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಮಾಡಿದೆ,(ಏಜೆನ್ಸೀಸ್).