ನ್ಯೂಸ್

ಪಾತ್ರೆಯಲ್ಲಿ ಕುದಿಯುತ್ತಿತ್ತು ಆ ಮಾತೃ ಹೃದಯ...!

sspmiracle1982

ಕೀನ್ಯಾ : ಕಿಲ್ಲರ್ ಕರೊನಾ ಜಗತ್ತಿನಾದ್ಯಂತ ರಣಕೇಕೆ ಹಾಕುತ್ತಿದ್ದು, ಲಕ್ಷಾನುಗಟ್ಟಲೆ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಜತೆಗೆ ಕೋಟ್ಯಂತರ ಕುಟುಂಬಗಳಿಗೆ ಕಿತ್ತು ತಿನ್ನುವ ಬಡತನವನ್ನೂ ಸೃಷ್ಟಿಸಿ ಅತ್ತ ಬದುಕಲೂ ಆಗದಂತೆ, ಇತ್ತ ಸಾಯಲೂ ಆಗದಂತೆ ಮಾಡಿಟ್ಟಿದೆ.

ಕಡು ಬಡತನವನ್ನೇ ಜೀವನವಾಗಿಸಿಕೊಂಡ ತಾಯಿಯೊಬ್ಬಳು ಮಕ್ಕಳ ಹಸಿವು ನೀಗಿಸಲು ಪಾತ್ರೆಯಲ್ಲಿ ಕಲ್ಲುಗಳನ್ನಿಟ್ಟು ಬೇಯಿಸಿ ಆಹಾರ ತಯಾರಿಸುತ್ತಿರುವಂತೆ ನಟಿಸಿ, ಮಕ್ಕಳಿಗೆ ಸಮಾಧಾನ ಪಡಿಸುವಂಥ ಮನಕಲುಕುವ ಘಟನೆ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಈ ಘಟನೆ ನಡೆದದ್ದು ಕೀನ್ಯಾದ ಮೊಂಬಾಸ ಪ್ರದೇಶದಲ್ಲಿ. ಈ ಕುರಿತು ಮಾಧ್ಯಮವೊಂದು ಮಾಡಿದ ವರದಿ ಜಗತ್ತಿನಾದ್ಯಂತ ವೈರಲ್ ಆಗಿ ಆ ಮಹಾತಾಯಿಗೆ ಸಹಾಯ ಹಸ್ತಗಳ ಮಹಾಪೂರವೇ ಹರಿದು ಬಂದಿದೆಯಂತೆ..!

ಎಂಟು ಮಕ್ಕಳ ಆ ತಾಯಿಯ ಹೆಸರು ಪೆನಿನಾಹ್ ಬಹತಿ ಕಿಟ್ಸಾವೋ. ಅನಕ್ಷರಸ್ಥೆಯಾದ ಆಕೆ ಬದುಕಿನ ಬಂಡಿ ಸಾಗಿಸಲು ಮಾಡುತ್ತಿದ್ದುದು ಬಟ್ಟೆ ತೊಳೆಯುವ ಕಾಯಕ. ಎರಡು ಕೋಣೆಗಳ ಮನೆಯಲ್ಲಿ ವಾಸಿಸುತ್ತಿರುವ ಆಕೆ ನೀರು, ವಿದ್ಯುತ್​ನಂತಹ ಅಗತ್ಯ ಸೌಲಭ್ಯಗಳಿಂದ ವಂಚಿತಳಾಗಿದ್ದು, ಈ ಬದುಕು ಅಸಹನೀಯವಾಗಿದೆ ಎನ್ನುತ್ತಾಳೆ. ಮಕ್ಕಳಿಗೆ ಅಡುಗೆ ಮಾಡುತ್ತಿರುವಂತೆ ಆಕೆ ನಟಿಸುತ್ತಿರುವಾಗ ಅವರು ಮಲಗಲಾರಂಭಿಸುತ್ತಿದ್ದಂತೆ, ಆದರೆ ಏನಾಗುತ್ತಿದೆ ಎಂದೂ ಅವರಿಗೆ ತಿಳಿಯುತ್ತಿತ್ತು, ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಅವರಿಗೆ ತಿಳಿದಿದೆ. ಆದರೆ ನನ್ನ ಬಳಿ ಏನೂ ಇಲ್ಲದ ಕಾರಣ ಅವರಿಗಾಗಿ ನಾನು ಏನೂ ಮಾಡಲು ಆಗುತ್ತಿಲ್ಲ ಎಂದು ಆಕೆ ಮಾಧ್ಯಮವೊಂದಕ್ಕೆ ಹೇಳಿದ್ದಳು.

ಈ ಹಿಂದೆ ಡಕಾಯಿತರ ಗುಂಪೊಂದು ಆಕೆಯ ಗಂಡನನ್ನು ಕೊಲೆ ಮಾಡಿತ್ತು. ಮಹಾಮಾರಿ ಕರೊನಾದಿಂದಾಗಿ ಆಕೆಗೆ ಕೆಲಸಕ್ಕೂ ಧಕ್ಕೆಯುಂಟಾಯಿತು. ದುಡ್ಡಿಲ್ಲದೆ ಪರದಾಟ ಶುರುವಾಗಿ ಮಕ್ಕಳಿಗೆ ಹೊಟ್ಟೆ ತುಂಬಿಸಲು ಹೆಣಗಾಡತೊಡಗಿದಳು. ಕಾರಣ ಆಹಾರ ತಯಾರಿಸುತ್ತಿರುವಂತೆ ಮಕ್ಕಳ ಮುಂದೆ ನಟಿಸುತ್ತಿದ್ದಳು. ಈ ಹೃದಯವಿದ್ರಾವಕ ಸ್ಥಿತಿ ಕಂಡು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದರು. ಈ ಕುರಿತು ಮಾಧ್ಯಮದಲ್ಲಿ ಪ್ರಕಟಗೊಂಡ ವರದಿಗೆ ಆರ್ಥಿಕ ಸಂಕಷ್ಟದ ಮಧ್ಯದಲ್ಲೂ ಅಲ್ಲಿಯ ಜನ ಸ್ಪಂದಿಸಿದ್ದರು. ಆಕೆಗೆ ಈಗ ನೆರವಿನ ಮಹಾಪೂರವೇ ಹರಿದು ಬರುತ್ತಿದೆ (ಏಜೆನ್ಸೀಸ್)