Landslide: ಜಮ್ಮು-ಕಾಶ್ಮೀರದ ಕತ್ರಾದಲ್ಲಿರುವ ವೈಷ್ಣೋದೇವಿ ಯಾತ್ರೆ ಮಾರ್ಗದಲ್ಲಿ ಮಂಗಳವಾರ (ಆಗಸ್ಟ್ 27) ಮಧ್ಯಾಹ್ನ 3 ಗಂಟೆಗೆ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 30 ಜನ ಮೃತಪಟ್ಟಿದ್ದಾರೆ ಎಂದು ಎಸ್ಎಸ್ಪಿ ರಿಯಾಸಿ ಪರಮವೀರ್ ಸಿಂಗ್ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ತೀರ್ಥಯಾತ್ರೆ ಮಾರ್ಗದ ಮಧ್ಯದಲ್ಲಿ ಅಧ್ಕುವರಿಯಲ್ಲಿ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಹಲವಾರು ಭಕ್ತರು ಇನ್ನೂ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಬುಧವಾರ ಸತತ ನಾಲ್ಕನೇ ದಿನವೂ ನಿರಂತರ ಮಳೆಯಾಗುತ್ತಿದ್ದು, ದಿಢೀರ್ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ವ್ಯಾಪಕ ನಷ್ಟ ಸಂಭವಿಸಿದೆ.
ತಾವಿ, ಚೆನಾಬ್ ಮತ್ತು ಝೀಲಂ ಸೇರಿದಂತೆ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಸಾರಿಗೆ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಚಕ್ಕಿ ನದಿಯ ಪ್ರವಾಹದಿಂದ ಹಳಿಗಳು ಕೊಚ್ಚಿಕೊಂಡು ಹೋಗಿದ್ದು ಕನಿಷ್ಠ 18 ರೈಲುಗಳ ಸಂಚಾರ ರದ್ದುಗೊಂಡಿದೆ. ಕೇಂದ್ರಾಡಳಿತ ಪ್ರದೇಶದ ಹೆಚ್ಚಿನ ಭಾಗಗಳಲ್ಲಿ ದೂರಸಂಪರ್ಕ ಸೇವೆಗಳು ಡ್ಯಾಮೇಜ್ ಆಗಿದ್ದು, ಲಕ್ಷಾಂತರ ಜನರ ಸಂವಹನ ಸಂಪರ್ಕದಿಂದ ಕಡಿತಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಶ್ತ್ವಾರ್‌ನ ಮಾರ್ಗಿ ಪ್ರದೇಶದಲ್ಲಿ ಹಠಾತ್ ಪ್ರವಾಹದಿಂದ 10 ಮನೆಗಳು ಮತ್ತು ಒಂದು ಸೇತುವೆಯನ್ನು ಕೊಚ್ಚಿ ಹೋಗಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಕಥುವಾದ ಲಖನ್‌ಪುರ ಗ್ರಾಮದಲ್ಲಿ ಒಂದು ಡಜನ್‌ಗೂ ಹೆಚ್ಚು ಅರೆಸೈನಿಕ ಸಿಬ್ಬಂದಿ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದು, ಸ್ಥಳಾಂತರಿಸುವ ಪ್ರಯತ್ನಗಳು ಮುಂದುವರೆದಿವೆ. (ಏಜೆನ್ಸೀಸ್)