WEB
ನ್ಯೂಸ್

ಗುಜರಾತ್‌ನಲ್ಲಿ ವರುಣನ ಅಬ್ಬರ: ಮಳೆಯಿಂದ ತಪ್ಪಿಸಿಕೊಳ್ಳಲು ಮನೆಯ ಮಾಳಿಗೆ ಏರಿದ ಸಿಂಹಗಳ ಫ್ಯಾಮಿಲಿ! | Lions Family

ಗುಜರಾತ್‌ನ ಗಿರ್ ಸೋಮನಾಥ್‌ನಲ್ಲಿ ಮಳೆಯಿಂದ ಪಾರಾಗಲು ಆರು ಸಿಂಹಗಳ ಕುಟುಂಬ ಮನೆಯ ಮೇಲ್ಛಾವಣಿಯಲ್ಲಿ ಆಶ್ರಯ ಪಡೆದಿದೆ. ಇದರ ವಿಡಿಯೋ ವೈರಲ್ ಆಗಿದೆ.

Gujarat lion viral video: ಗುಜರಾತ್‌ನಲ್ಲಿ ಭಾರಿ ಮಳೆಯಿಂದ ತಪ್ಪಿಸಿಕೊಳ್ಳಲು ಆರು ಸಿಂಹಗಳ ಕುಟುಂಬವೊಂದು ಮನೆಯ ಮೇಲ್ಛಾವಣಿಯನ್ನೇ ಆಶ್ರಯ ಮಾಡಿಕೊಂಡಿರುವ ಅಪರೂಪದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಉನಾ ತಾಲ್ಲೂಕಿನ ಝುಡ್ವಡಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದು ಗಂಡು ಸಿಂಹ, ಮೂರು ಹೆಣ್ಣು ಸಿಂಹಗಳು ಹಾಗೂ ಎರಡು ಮರಿಗಳು ಸೇರಿ ಒಟ್ಟು ಆರು ಸಿಂಹಗಳು ಗ್ರಾಮದ ತೋಟದ ಮನೆಯೊಂದರ ಮೇಲ್ಛಾವಣಿಯಲ್ಲಿ ಕುಳಿತಿದ್ದವು. ಮಳೆಯಿಂದ ತಪ್ಪಿಸಿಕೊಳ್ಳಲು ಒಣ ಹಾಗೂ ಎತ್ತರದ ಜಾಗ ಹುಡುಕಿಕೊಂಡು ಸಿಂಹಗಳು ಮೇಲ್ಛಾವಣಿಗೆ ಬಂದಿದ್ದವು ಎನ್ನಲಾಗಿದೆ.

ಮೇಲ್ಛಾವಣಿಯಲ್ಲೇ ಸಿಂಹಗಳ ವಿಶ್ರಾಂತಿ

ಮಾಹಿತಿ ಪ್ರಕಾರ, ರಾತ್ರಿ ಬೇಟೆಯಾಡಿದ ಬಳಿಕ ಹಗಲಿನಲ್ಲಿ ಸುರಿಯುತ್ತಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಸಿಂಹಗಳು ಹಲವು ಗಂಟೆಗಳ ಕಾಲ ಮೇಲ್ಛಾವಣಿಯಲ್ಲೇ ಕುಳಿತು ವಿಶ್ರಾಂತಿ ಪಡೆದಿವೆ. ಸಿಂಹಗಳ ಈ ಅಪರೂಪದ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ‘ಎಫ್‌ಐಆರ್‌ಗೆ ಇಷ್ಟು ತಡವೇಕೆ?’; ಆಂಧ್ರ ಪೊಲೀಸರಿಗೆ ಸುಪ್ರೀಂ ಕೋರ್ಟ್ ಚಾಟಿ | Sai Krishna custodial death

ಏಷ್ಯಾಟಿಕ್ ಸಿಂಹಗಳ ಓಡಾಟ

ಗಿರ್ ರಾಷ್ಟ್ರೀಯ ಉದ್ಯಾನವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಷ್ಯಾಟಿಕ್ ಸಿಂಹಗಳ ಓಡಾಟ ಸಾಮಾನ್ಯವಾಗಿದೆ. ಭಾರಿ ಮಳೆಯಂತಹ ಸಂದರ್ಭಗಳಲ್ಲಿ ಒಣ ಹಾಗೂ ಎತ್ತರದ ಜಾಗ ಹುಡುಕುತ್ತಾ ಸಿಂಹಗಳು ಕೆಲವೊಮ್ಮೆ ಜನವಸತಿ ಪ್ರದೇಶಗಳತ್ತ ಬರುವುದೂ ಸಾಮಾನ್ಯ. (ಏಜೆನ್ಸೀಸ್)