ಗುಡುಗು ಸಹಿತ ಮಳೆಗೆ ಬೆಚ್ಚಿಬಿದ್ದ ಬೆಂಗಳೂರು 
ನ್ಯೂಸ್

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮಳೆ ಅಬ್ಬರ; ಗುಡುಗಿನ ಸದ್ದಿಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ! | Bengaluru Rain

ಮಹಾನಗರಿ ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆಯೇ ಭಾರಿ ಗುಡುಗು ಸಹಿತ ಮಳೆಯಾಗಿದೆ. ಮುಂಜಾನೆ 43 ಮಿಮೀ ಮಳೆ ದಾಖಲಾಗಿದ್ದು, ನಗರದ ಹಲವೆಡೆ ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

Bengaluru Heavy Rain: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆಯೇ ಮಳೆರಾಯ ಅಬ್ಬರಿಸಿದ್ದಾನೆ. ಭಾರಿ ಮಳೆ ಜೊತೆಗೆ ಗುಡುಗಿನ ಸದ್ದಿಗೆ ನಗರವೇ ಬೆಚ್ಚಿಬಿದ್ದಿದ್ದು, ಹಲವು ಕಡೆ ರಸ್ತೆಗಳು ಜಲಾವೃತವಾಗಿವೆ. ಬೆಳಗಿನ ಹೊತ್ತಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.

ಮಳೆ ಮಾತ್ರವಲ್ಲ, ಗುಡುಗಿನ ಸದ್ದೂ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ. ಮುಂಜಾನೆ ನಿದ್ದೆಯಲ್ಲಿದ್ದ ಹಲವರು ಏಕಾಏಕಿ ಕೇಳಿಬಂದ ಭಾರಿ ಸದ್ದಿಗೆ ಎಚ್ಚರಗೊಂಡಿದ್ದಾರೆ. ಗುಡುಗಿನ ಸದ್ದು ಬಾಂಬ್ ಸ್ಫೋಟದಂತಿತ್ತು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮುಂಜಾನೆ ಧಾರಾಕಾರ ಮಳೆ

ಬೆಂಗಳೂರಿನಲ್ಲಿ ಮುಂಜಾನೆ 5.30ರ ವೇಳೆಗೆ 43 ಮಿಮೀ ಮಳೆ ದಾಖಲಾಗಿದೆ. ನಗರದ ಸ್ವಯಂಚಾಲಿತ ಹವಾಮಾನ ಕೇಂದ್ರದ (City AWS) ಪ್ರಕಾರ 39.5 ಮಿಮೀ ಮಳೆಯಾಗಿದೆ. ಇನ್ನು ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿ 20 ಮಿಮೀ ಮಳೆ ದಾಖಲಾಗಿದ್ದು, ಅಲ್ಲಿನ ಈ ವರ್ಷದ ಒಟ್ಟು ಮಳೆ ಪ್ರಮಾಣ 580 ಮಿಮೀಗೆ ತಲುಪಿದೆ.

ಈ ಮಳೆಯೊಂದಿಗೆ ಬೆಂಗಳೂರಿನ ಈ ವರ್ಷದ ಒಟ್ಟು ಮಳೆ ಪ್ರಮಾಣ ಸುಮಾರು 700 ಮಿಮೀ ಆಗಿದೆ. ನಗರದ ವಾರ್ಷಿಕ ಸರಾಸರಿ ಮಳೆ 1,040 ಮಿಮೀ ಆಗಿದ್ದು, ಆ ಪ್ರಮಾಣ ತಲುಪಲು ಇನ್ನೂ ಸುಮಾರು 300 ಮಿಮೀ ಮಳೆ ಬೇಕಿದೆ.

ಇದನ್ನೂ ಓದಿ: Digital Arrest Scam: ನಗ್ನ ವೀಡಿಯೊ ವೈರಲ್ ಮಾಡುವುದಾಗಿ ಬೆದರಿಕೆ; ಯುವಕನಿಂದ 49 ಲಕ್ಷ ರೂ. ಸುಲಿಗೆ!

ಗುಡುಗಿನ ಅಬ್ಬರಕ್ಕೆ ಎಚ್ಚರಗೊಂಡ ಜನ

ಮಂಗಳವಾರ ಮುಂಜಾನೆ ಮಳೆಯ ಜತೆಗೆ ಗುಡುಗಿನ ಅಬ್ಬರವೂ ಜೋರಾಗಿತ್ತು. ಭಾರಿ ಸದ್ದಿಗೆ ಗಾಢ ನಿದ್ದೆಯಲ್ಲಿದ್ದ ಅನೇಕರು ಎಚ್ಚರಗೊಂಡಿದ್ದಾರೆ. ಈ ಬಗ್ಗೆ ಬೆಂಗಳೂರಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದು, ಮುಂಜಾನೆಯ ಗುಡುಗು-ಮಳೆಯ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

ಹಲವು ಪ್ರಮುಖ ರಸ್ತೆಗಳು ಜಲಾವೃತ

ಭಾರಿ ಮಳೆಗೆ ಎಂ.ಜಿ. ರಸ್ತೆ, ಇಂದಿರಾನಗರ, ಹೆಬ್ಬಾಳ, ಕೆ.ಆರ್. ಪುರಂ ಸೇರಿದಂತೆ ನಗರದ ಹಲವು ಕಡೆ ರಸ್ತೆಗಳ ಮೇಲೆ ನೀರು ನಿಂತಿದೆ. ಬೆಳಗಿನ ಹೊತ್ತಿನಲ್ಲೇ ಮಳೆ ಸುರಿದಿದ್ದರಿಂದ ಕಚೇರಿ ಹಾಗೂ ಕೆಲಸಕ್ಕೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವಂತಾಯಿತು. ಕೆಲವೆಡೆ ನೀರು ನಿಂತಿದ್ದರಿಂದ ಟ್ರಾಫಿಕ್​ ಕಂಡುಬಂತು.

ಬಂಗಾಳಕೊಲ್ಲಿ ವಾಯುಭಾರ ಕುಸಿತ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಅಕ್ಟೋಬರ್ 5 ಮತ್ತು 6ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣದ ಜತೆಗೆ ಮಳೆಯಾಗಿದೆ.