Digital Arrest Scam: ನಗ್ನ ವೀಡಿಯೊ ವೈರಲ್ ಮಾಡುವುದಾಗಿ ಬೆದರಿಕೆ; ಯುವಕನಿಂದ 49 ಲಕ್ಷ ರೂ. ಸುಲಿಗೆ!

 ಎಐ ಸಹಾಯದಿಂದ ನಿರ್ಮಿಸಿದ ಚಿತ್ರ
ಎಐ ಸಹಾಯದಿಂದ ನಿರ್ಮಿಸಿದ ಚಿತ್ರ
Published on: 
  • ನಗ್ನ ವೀಡಿಯೊ ವೈರಲ್ ಮಾಡುವುದಾಗಿ ಬೆದರಿಸಿ 25 ವರ್ಷದ ಯುವಕನಿಗೆ ವಂಚನೆ.

  • 49 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ ಸೈಬರ್ ವಂಚಕರು.

  • ದೆಹಲಿ ಸೈಬರ್ ಕ್ರೈಮ್ ಅಧಿಕಾರಿ 'ಸಂಜಯ್ ಅರೋರಾ' ಎಂದು ಹೇಳಿ ವಂಚನೆ.

ಅಹಮದಾಬಾದ್​: 25 ವರ್ಷದ ಯುವಕನೊಬ್ಬನ ಬೆತ್ತಲೆ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕಿ 49 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಸುಲಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಅಹಮದಾಬಾದ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಸಂತ್ರಸ್ತ ಯುವಕ ಅಹಮದಾಬಾದ್​ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹೀಗೊಮ್ಮೆ ಆತ ಯಾವುದೋ ವಿಚಾರದಲ್ಲಿ ಮಗ್ನನಾಗಿದ್ದ. ಈ ವೇಳೆ ಆತನಿಗೆ ವಾಟ್ಸಾಪ್​ ವಿಡಿಯೋ ಕರೆಯೊಂದು ಬಂದಿತ್ತು, ಯಾರದ್ದೋ ತುರ್ತು ಕರೆ ಇರಬಹುದು ಎಂದು ರಿಸೀವ್ ಮಾಡಿದ್ದ ಆತನಿಗೆ ಶಾಕ್​ ಕಾದಿತ್ತು. ಅತ್ತಲಿಂದ ಬೆತ್ತಲೆಯಾದ ಯುವತಿ ಕಾಣಿಸಿಕೊಂಡಿದ್ದಳು ಇದರಿಂದ ಆತ ಆತಂಕಕ್ಕೆ ಒಳಗಾಗಿ ನಂಬರ್​ ಬ್ಲಾಕ್​ ಮಾಡಿದ್ದ. ಆದರೆ, ಪಟ್ಟು ಬಿಡದ ವಂಚಕರು ಆತನಿಗೆ ಬ್ಯಾಕ್​ ಟು ಬ್ಯಾಕ್ ಕಾಲ್ ಮಾಡಿ, ಹಣ ಪೀಕಿದ್ದಾರೆ.

ಏನಾಗಿತ್ತು?

ಸೆ.3ರಂದು 25 ವರ್ಷದ ಸಂತ್ರಸ್ತ ಯುವಕನಿಗೆ ಅಪರಿಚಿತ ವಾಟ್ಸಾಪ್​ ಸಂಖ್ಯೆಯಿಂದ ವಿಡಿಯೋ ಕಾಲ್​ ಬಂದಿತ್ತು. ಇದನ್ನು ರಿಸೀವ್​ ಮಾಡಿದ, ಆದರೆ ಬೆತ್ತಲಾಗಿರುವ ಯುವತಿ ಕಂಡು ಕಾಲ್​ ಕಟ್ ಮಾಡಿ ನಂಬರ್​ ಬ್ಲಾಕ್​ ಮಾಡಿದ. ಸ್ವಲ್ಪ ಸಮಯದ ನಂತರ ಬೇರೆ ಸಂಖ್ಯೆಯಿಂದ ಮತ್ತೊಂದು ವಾಟ್ಸಾಪ್ ಕರೆ ಬಂತು. ಅದನ್ನು ರಿಸೀವ್ ಮಾಡಿದ. ಆ ವೇಳೆ ಅತ್ತಲಿಂದ ವಂಚಕರು ನಗ್ನ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಹಣ ವರ್ಗಾವಣೆ ಮಾಡದಿದ್ದರೆ ವೀಡಿಯೊವನ್ನು ವೈರಲ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಯುವಕ ಆ ಕರೆಯನ್ನು ಕಡಿತಗೊಳಿಸಿ ಆ ಸಂಖ್ಯೆಯನ್ನೂ ಬ್ಲಾಕ್ ಮಾಡಿದ್ದಾನೆ.

ಪೊಲೀಸರ ಹೆಸರಲ್ಲಿ ವಂಚನೆ

ಮತ್ತೆ ಸೆ.27ರಂದು ಮತ್ತೊಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ನಾನು ದೆಹಲಿ ಸೈಬರ್ ಕ್ರೈಮ್ ಶಾಖೆಯ ಅಧಿಕಾರಿ ಸಂಜಯ್ ಅರೋರಾ ಎಂದು ಬೆತ್ತಲೆ ವಿಡಿಯೋ ಬಗ್ಗೆ ಮಾತನಾಡಿ. ಇದರಿಂದ ಮುಂದಾಗುವ ಪೊಲೀಸ್ ಕ್ರಮದ ಕುರಿತು ವಿವರಿಸಿದ್ದಾನೆ. ಜೊತೆಗೆ 7 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ ಮತ್ತು ಅಹಮದಾಬಾದ್ ಪೊಲೀಸರು ಬಂಧಿಸಬಹುದು ಭಯಪಡಿಸಿದ್ದಾರೆ.

ಪದೇ ಪದೆ ಹಣಕ್ಕೆ ಬೇಡಿಕೆ

ಬಂಧನದ ಭೀತಿಯಿಂದ ಹಣ ನೀಡಲು ಒಪ್ಪಿದ್ದಾನೆ. ಇದಕ್ಕೆ ವಂಚಕರು ಮಾತನಾಡಿ, ಎರಡು ನಗ್ನ ವೀಡಿಯೊಗಳು ಬಂದಿದ್ದು, ಅವುಗಳನ್ನು ಡಿಲಿಟ್ ಮಾಡಲು 71,250 ರೂ. ಪಾವತಿಸಬೇಕೆಂದು ಹೇಳಿದ್ದಾನೆ. ಪೊಲೀಸ್ ಕ್ರಮದ ಭಯದಿಂದ ಅಷ್ಟೂ ಹಣವನ್ನು ಪಾವತಿ ಮಾಡಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ವಂಚಕರು, ಹಲವು ಕಾರಣ ಕೊಟ್ಟು, ವೃತ್ತಿ ಜೀವನ ಹಾಳು ಮಾಡ್ತೇವೆ. ಬಂಧಿಸುತ್ತೇವೆ ಎಂದು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಮಣಿದ ಯುವಕ, ವಂಚಕರು ನೀಡಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 49.78 ಲಕ್ಷ ಪಾವತಿ ಮಾಡಿದ್ದಾನೆ.

ದೂರು ದಾಖಲು

ಪದೇ ಪದೆ ಹಣಕ್ಕೆ ಬೇಡಿಕೆ ಇಡುತ್ತಿರುವುದನ್ನು ಮನಗಂಡ ಯುವಕ ತಾನು ಡಿಜಿಟಲ್​ ಅರೆಸ್ಟ್​ಗೆ ಒಳಗಾಗಿದ್ದೇನೆ ಎಂದು ಸೈಬರ್ ಕ್ರೈಮ್ ಶಾಖೆಯನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾನೆ. ಪ್ರಸ್ತುತ ಪೊಲೀಸರು ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸುತ್ತಿದ್ದು, ವಂಚನೆಯಲ್ಲಿ ಎಷ್ಟು ಜನ ಭಾಗಿಯಾಗಿದ್ದಾರೆ ಎನ್ನುವುದರ ಸುತ್ತ ಮಾಹಿತಿ ಕಲೆ ಹಾಕುತ್ತಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net