Heavy Rain In Maharashtra: ಮಹಾರಾಷ್ಟ್ರವು ಧಾರಾಕಾರ ಮಳೆಯಿಂದ ಸಂಪೂರ್ಣವಾಗಿ ತತ್ತರಿಸಿದ್ದು, ಮುಂದಿನ 48 ಗಂಟೆಗಳು ರಾಜ್ಯದ ಪಾಲಿಗೆ ನಿರ್ಣಾಯಕ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ಇಲಾಖೆಯೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಮುಂಬೈ, ಥಾಣೆ, ರಾಯಗಡ್, ರತ್ನಗಿರಿ ಮತ್ತು ಸಿಂಧುದುರ್ಗವನ್ನು ಹೈ ಅಲರ್ಟ್‌ನಲ್ಲಿ ಇರಿಸಿದ್ದಾರೆ. ಸರ್ಕಾರ ಎಲ್ಲ ಪ್ರದೇಶಗಳ ಬಗ್ಗೆ ನಿಗಾ ಇಡುತ್ತಿದ್ದು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ನಿರಂತರ ಮಳೆಯಿಂದಾಗಿ ಹಠಾತ್ ಪ್ರವಾಹ, ಭೂಕುಸಿತ ಮತ್ತು ವ್ಯಾಪಕ ಜಲಾವೃತ ಉಂಟಾಗಿದ್ದು, ಹಲವಾರು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವರುಣನ ಆರ್ಭಟಕ್ಕೆ ಸುಮಾರು ಆರು ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ನಾಂದೇಡ್‌ನಲ್ಲಿ 290 ಕ್ಕೂ ಹೆಚ್ಚು ನಿವಾಸಿಗಳನ್ನು ರಕ್ಷಿಸಲಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಕೊಂಕಣ ಪ್ರದೇಶ
ರಾಯಗಢ ಜಿಲ್ಲೆಯಲ್ಲಿ ಕೇವಲ 24 ಗಂಟೆಗಳಲ್ಲಿ 160 ಮಿ.ಮೀ. ಮಳೆಯಾಗಿದ್ದು, ಕುಂಡಲಿಕಾ ಮತ್ತು ಸಾವಿತ್ರಿ ನದಿಗಳು ಅಪಾಯದ ಮಟ್ಟಕ್ಕಿಂತ ಮೇಲಕ್ಕೆ ಹರಿಯುತ್ತಿವೆ. ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮಹಾದ್ ಮತ್ತು ನಾಗೋಥಾನೆಯಲ್ಲಿ ಭೂಕುಸಿತದಿಂದಾಗಿ ಪ್ರಮುಖ ರಸ್ತೆಗಳು ಸಂಪರ್ಕ ಕಡಿತಗೊಂಡಿವೆ.
ಪಶ್ಚಿಮ ಮಹಾರಾಷ್ಟ್ರ
ಕೊಲ್ಲಾಪುರದಲ್ಲಿ, ಭಾರೀ ಒಳಹರಿವು ರಾಧಾನಗರಿ ಅಣೆಕಟ್ಟಿನಿಂದ 11,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಪಂಚಗಂಗಾ ನದಿಯು ಈ ಮಾನ್ಸೂನ್‌ನಲ್ಲಿ ಐದನೇ ಬಾರಿಗೆ ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿದ್ದು, ಕೊಲ್ಲಾಪುರ-ರತ್ನಗಿರಿ ಹೆದ್ದಾರಿಯಲ್ಲಿ ಭೂಕುಸಿತಗಳು ಸಹ ಸಂಭವಿಸಿವೆ.
ವಿದರ್ಭ ಮತ್ತು ಮರಾಠವಾಡ
ಗಡ್ಚಿರೋಲಿಯ ಭಮ್ರಗಡ್ ತಾಲೂಕು ತೀವ್ರವಾಗಿ ಹಾನಿಗೊಳಗಾಗಿದ್ದು, ಪರ್ಲ್ಕೋಟಾ ನದಿ ಉಕ್ಕಿ ಹರಿದ ನಂತರ 50 ಕ್ಕೂ ಹೆಚ್ಚು ಗ್ರಾಮಗಳು ಪ್ರತ್ಯೇಕಗೊಂಡಿವೆ. ವಾಶಿಮ್‌ನಲ್ಲಿ, ಉಕ್ಕಿ ಹರಿಯುವ ನದಿಗಳು ಖಾರಿಫ್ ಬೆಳೆಗಳ ನಾಶಪಡಿಸಿವೆ. ಕೊಡ್ಪೆ ಗ್ರಾಮದ 19 ವರ್ಷದ ಯುವಕನೊಬ್ಬ ಉಕ್ಕಿ ಹರಿಯುವ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ನಾಗರಿಕರು ಮನೆಯೊಳಗೆ ಇರಲು, ಅನಗತ್ಯ ಪ್ರಯಾಣವನ್ನು ತಪ್ಪಿಸಲು ಮತ್ತು ಸುರಕ್ಷತಾ ಸಲಹೆಗಳನ್ನು ಪಾಲಿಸಲು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್)