ಬೆಂಗಳೂರು: ಎಸಿಬಿ ದಾಳಿಗೊಳಗಾದ 15 ಅಧಿಕಾರಿಗಳು ಅಕ್ರಮವಾಗಿ ಹೊಂದಿರುವ ಸಂಪತ್ತು ನಿಬ್ಬೆರಗಾಗಿಸುವಂತಿದೆ. ಪ್ರತಿಯೊಬ್ಬ ಅಧಿಕಾರಿಯೂ ಆದಾಯಕ್ಕಿಂತ ಅತ್ಯಧಿಕ ಪ್ರಮಾಣದಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಹೊಂದಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಬುಧವಾರ ಎಸಿಬಿ ಅಧಿಕಾರಿಗಳು ರಾಜ್ಯಾದ್ಯಂತ ಭ್ರಷ್ಟರ ಸರ್ಕಾರಿ ನೌಕರರ ಕೋಟೆಗೆ ಲಗ್ಗೆಯಿಟ್ಟು ಜಾಲಾಡಿದಾಗ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಬೆಳಕಿಗೆ ಬಂದಿತ್ತು. ಕೆಲವೆಡೆ ಗುರುವಾರ ಸಂಜೆವರೆಗೂ ಎಸಿಬಿ ದಾಳಿ ನಡೆಸಿತ್ತು. ಜಪ್ತಿ ಮಾಡಿದ ಎಲ್ಲ ದಾಖಲೆ, ಆಸ್ತಿ ಪತ್ರ, ವಸ್ತುಗಳನ್ನು ಪರಿಶೀಲಿಸಿದಾಗ ಇವರ ಆಸ್ತಿಯ ಪ್ರಮಾಣ ಇನ್ನಷ್ಟು ಏರಿಕೆಯಾಗಿರುವುದು ಕಂಡುಬಂದಿದೆ.
ಇಬ್ಬರ ಬಂಧನ: ಜೇವರ್ಗಿ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಎಸ್.ಎಂ. ಬಿರಾದರ್ ಹಾಗೂ ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರನ್ನು ಬಂಧಿಸಲಾಗಿದೆ. ಇವರು ಇನ್ನಷ್ಟು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಸುಳಿವು ಸಿಕ್ಕಿದೆ. ಜತೆಗೆ ತನಿಖೆಗೆ ಸೂಕ್ತ ರೀತಿಯಲ್ಲಿ ಸಹಕರಿಸದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಬಂಧಿಸಲಾಗಿದೆ.
ಲಾಕರ್ನಲ್ಲಿದ್ದ ಚಿನ್ನಾಭರಣ ವಶ: ಕೆ.ಆರ್.ಪೇಟೆ ಕಾರ್ಯಪಾಲಕ ಇಂಜಿನಿಯರ್ ಕೆ.ಶ್ರೀನಿವಾಸ್ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಗುರುವಾರ ಮೈಸೂರಿನ ಸರಸ್ವತಿಪುರದಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ಲಾಕರ್ ಪರಿಶೀಲಿಸಿದರು. ಶ್ರೀನಿವಾಸ್ ಹಾಗೂ ಅವರ ಪತ್ನಿ ಸಮ್ಮುಖದಲ್ಲಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದರು.
ಮುಂದಿನ ಕ್ರಮ ಏನು?: ದಾಳಿ ಮುಕ್ತಾಯಗೊಂಡ ಬಳಿಕ ದಾಖಲೆ ಗಳನ್ನು ಕೂಲಂಕಷವಾಗಿ ಪರಿಶೀಲಿಸಿ ದಾಳಿಗೊಳಗಾದ 15 ಮಂದಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ವಿಚಾರಣೆ ವೇಳೆ ಜಪ್ತಿ ಮಾಡಿದ ವಸ್ತುಗಳು, ಆಸ್ತಿ-ಪಾಸ್ತಿ ಸಂಬಂಧಿಸಿದಂತೆ ಸೂಕ್ತ ದಾಖಲೆ ನೀಡದಿದ್ದರೆ 15 ನೌಕರರಿಗೂ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ವಿಚಾರಣೆಗೆ ಸಹಕರಿಸದಿದ್ದರೆ ಬಂಧಿಸಲಾಗುತ್ತದೆ.
ಎಸಿಬಿ ದಾಳಿ ಸಹಜ ಪ್ರಕ್ರಿಯೆ. ಅಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹದಳ ಕ್ರಮ ಕೈಗೊಳ್ಳಲಿದೆ.
| ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಶೇ.879.53 ಅಕ್ರಮ ಆಸ್ತಿ ಪತ್ತೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ವಿುತಿ ಕೇಂದ್ರದ ಮಾಜಿ ಪ್ರಾಜೆಕ್ಟ್ ಡೈರೆಕ್ಟರ್ ಆರ್.ಎನ್.ವಾಸುದೇವ್ ಆದಾಯಕ್ಕಿಂತ ಅತಿ ಹೆಚ್ಚಿನ ಆಸ್ತಿ ಹೊಂದಿರುವುದು ಗೊತ್ತಾಗಿದೆ. ಇದುವರೆಗಿನ ತನಿಖೆಯಲ್ಲಿ 18,20,63,868 ರೂ. ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಬ್ಯಾಂಕ್ ಠೇವಣಿ ಇತ್ಯಾದಿಗಳು ಸಿಕ್ಕಿವೆ. ವಾಸುದೇವ್ ಆದಾಯಕ್ಕಿಂತ ಬರೊಬ್ಬರಿ ಶೇ.879.53 ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವುದು ಕಂಡು ಎಸಿಬಿ ಅಧಿಕಾರಿಗಳೇ ದಂಗಾಗಿದ್ದಾರೆ. ಬೆಂಗಳೂರು ಆಸು-ಪಾಸಿನಲ್ಲೇ 9 ಮನೆ, 8 ನಿವೇಶನ 98 ಲಕ್ಷ ರೂ. ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳನ್ನು ಹೊಂದಿದ್ದಾರೆ.
ಡಿ-ಗ್ರೂಪ್ ನೌಕರನ ಬಳಿ 6 ಮನೆ: ಬೆಂಗಳೂರಿನ ಮಾರಪ್ಪನಪಾಳ್ಯ ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್ನ ಗ್ರೂಪ್-ಡಿ ನೌಕರ ಜಿ.ವಿ.ಗಿರಿ ರಾಜಧಾನಿಯಲ್ಲಿ 6.24 ಕೋಟಿ ರೂ. ಮೌಲ್ಯದ 6 ವಾಸದ ಮನೆ, 4 ಐಷಾರಾಮಿ ಕಾರು, 8 ಕೆಜಿ ಬೆಳ್ಳಿಯ ವಸ್ತು ಸೇರಿ ಇನ್ನೀತರ ಆಸ್ತಿ-ಪಾಸ್ತಿ ಹೊಂದಿರುವುದು ಗೊತ್ತಾಗಿದೆ. ಈತ ಆದಾಯಕ್ಕಿಂತ ಬರೊಬ್ಬರಿ ಶೇ.563.85 ಅಕ್ರಮ ಆಸ್ತಿ ಹೊಂದಿದ್ದಾನೆ.
ಕಲಬುರಗಿ: ಲೋಕೋಪಯೋಗಿ ಇಲಾಖೆಯ ಜೇವರ್ಗಿ ಉಪ ವಿಭಾಗದ ಕಿರಿಯ ಅಭಿಯಂತರ ಶಾಂತಗೌಡ ಬಿರಾದಾರ ಅವರನ್ನು ಗುರುವಾರ ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು, ವಿವಿಧ ಬ್ಯಾಂಕ್ ಖಾತೆಗಳನ್ನು ಜಾಲಾಡಿದರು. ಬಳಿಕ ಜಿಮ್ಸ್ನಲ್ಲಿ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, 14 ದಿನದ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಇವರ ಮನೆಯ ಬಾತ್ ರೂಂ ಪೈಪ್ನಲ್ಲಿ ನೀರಿನಂತೆ ಹರಿದುಬಂದಿದ್ದ 54 ಲಕ್ಷ ರೂ. ಅನ್ನು ಶಾಂತಗೌಡರು ಮಗನ ಸರ್ಕಾರಿ ನೌಕರಿಗಾಗಿ ಲಂಚ ನೀಡಲು ಬೇರೆಯವರಿಂದ ಪಡೆದು ತಂದಿದ್ದರು ಎನ್ನಲಾಗಿದೆ. ಹೀಗಾಗಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಉದ್ಯೋಗ ಕೊಡಿಸುವ ಸಲುವಾಗಿ ಬುಧವಾರ ಮಧ್ಯಾಹ್ನ ಹಣ ಕೊಡಬೇಕಿತ್ತು. ಆ ಮೂಲಕ ಪುತ್ರನ ಲೈಫ್ ಸೆಟಲ್ ಮಾಡಲು ಹೊರಟಿದ್ದರು. ಆದರೆ ಬೆಳಗ್ಗೆಯೇ ಎಸಿಬಿ ರೇಡ್ ಆಗಿದೆ.
ಹೊಸ ಟ್ರಂಕ್ ಖರೀದಿ: ಶಾಂತಗೌಡರಿಂದ ವಶಪಡಿಸಿಕೊಂಡ ನಗದು, ಚಿನ್ನಾಭರಣ, ಬೆಳ್ಳಿಯ ಸಾಮಗ್ರಿ ಹಾಗೂ ಮನೆ, ಜಮೀನು ಮತ್ತು ನಿವೇಶನಗಳ ಕಾಗದ ಪತ್ರಗಳು, ಕಲಬುರಗಿ, ಜೇವರ್ಗಿ, ಬೆಂಗಳೂರು ಸೇರಿ 16 ಕಡೆಗಳಲ್ಲಿರುವ ಬ್ಯಾಂಕ್ ಖಾತೆ ಪಾಸ್ ಬುಕ್, ಠೇವಣಿ ಪತ್ರ ಇತರ ಎಲ್ಲ ದಾಖಲೆಗಳನ್ನು ಇಡಲು ಪೆಟ್ಟಿಗೆ ಸಾಲದ ಕಾರಣ ಹೊಸ ಕಬ್ಬಿಣದ ಪೆಟ್ಟಿಗೆ (ಟ್ರಂಕ್)ಯನ್ನು ಎಸಿಬಿ ಸಿಬ್ಬಂದಿ ಸೂಪರ್ ಮಾರ್ಕೆಟ್ನಲ್ಲಿ ಖರೀದಿಸಿ ತಂದರು. ಅದರಲ್ಲಿ ಹಾಕಿ ಸೀಲ್ ಮಾಡಿ, ನಂತರ ಡಿಸಿ ಕಚೇರಿಯಲ್ಲಿರುವ ಖಜಾನೆಗೆ ರವಾನಿಸಿದ್ದಾರೆ.