ನ್ಯೂಸ್

ಬಿಸಿಲಿನ ಬೇಗೆಯಿಂದಾಗಿ 24 ಗಂಟೆಗಳಲ್ಲಿ 34 ಜನರು ಆಸ್ಪತ್ರೆಯಲ್ಲೇ ಸಾವು

ಬಲ್ಲಿಯಾ: ಬಿಸಿಲಿನ ಬೇಗೆಯಿಂದ ಅಸ್ವಸ್ಥರಾಗಿ 24 ಗಂಟೆಗಳಲ್ಲಿ 34 ಜನರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಪ್ರೆಸ್​ನಿಂದ ಬ್ಯಾಂಕ್​ ತಲುಪುವ ನಡುವೆ ನೋಟು ಮಿಸ್ಸಿಂಗ್? RBI ಹೇಳಿದ್ದಿಷ್ಟು!

ಹೆಚ್ಚಿನ ರೋಗಿಗಳು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಎಲ್ಲರೂ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರು. ತೀವ್ರ ಶಾಖದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಬಿಸಿಲಿನ ಬೇಗೆ ತಾಳಲಾರದೇ ಮೃತಪಟ್ಟಿದ್ದಾರೆ. ಬಿಸಿಲಿನ ಝಳಕ್ಕೆ ಜಿಲ್ಲೆಯ ಜನರು ತತ್ತರಿಸಿದ್ದು, ಜ್ವರ, ವಾಂತಿ, ಭೇದಿಯಿಂದಾಗಿ ಸುಮಾರು 400ಕ್ಕೂ ಹೆಚ್ಚಿನ ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಡಾ.ಜಯಂತ್ ಕುಮಾರ್ ತಿಳಿಸಿದ್ದಾರೆ.

ಭಾರತೀಯ ಹವಾಮಾನ ದತ್ತಾಂಶದ ಪ್ರಕಾರ (IMD), ಶುಕ್ರವಾರ ಬಲ್ಲಿಯಾದಲ್ಲಿ ಗರಿಷ್ಠ ತಾಪಮಾನವು 42.2 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದ್ದು, ಇದು ಇಲ್ಲಿನ ಸಾಮಾನ್ಯ ತಾಪಮಾನಕ್ಕಿಂತ 4.7 ಡಿಗ್ರಿ ಹೆಚ್ಚಾಗಿದೆ. ವಯಸ್ಸಾದವರು ಬಿಸಿಲಿನ ತಾಪವನ್ನು ಸಹಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿಗೆ ಬಿಸಿಲಿನ ಶಾಖದ ಅಪಾಯವನ್ನು ತಡೆಗಟ್ಟಲು ಆಸ್ಪತ್ರೆಯಲ್ಲಿ ಫ್ಯಾನ್‌ಗಳು, ಕೂಲರ್‌ಗಳು ಮತ್ತು ಏರ್ ಕಂಡಿಷನರ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ದಿವಾಕರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಬರೀ ಒಂದು ರೂಪಾಯಿಗೆ ಬಿರಿಯಾನಿ ತಿನ್ನಲು ಬಂದು ನೂರು ರೂಪಾಯಿ ದಂಡ ಕಟ್ಟಿದ ಜನರು..!

ಜತೆಗೆ ಉತ್ತರ ಭಾರತವು ತೀವ್ರ ತಾಪಮಾನಕ್ಕೆ ತತ್ತರಿಸುತ್ತಿದ್ದು, ಕಳೆದ ಮೂರು ದಿನಗಳಲ್ಲಿ ಬಿಹಾರದಲ್ಲಿಯೂ 44 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 44ರ ಪೈಕಿ 35 ಜನ ಪಾಟ್ನಾದಲ್ಲಿ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)