ನ್ಯೂಸ್

ಓ ಮಗನೇ ನೀ ಇಲ್ಲದೇ ನಾ ಹೇಗೆ ಬದುಕಲಿ? ಪುತ್ರನ ಸಮಾಧಿ ಬಳಿ ವಿಷ ಕುಡಿದಿದ್ದ ತಾಯಿ ದುರ್ಮರಣ! Mother

ಕರೀಂನಗರ: ತಾಯಿಯ ( Mother ) ಪ್ರೀತಿಗಿಂತ ದೊಡ್ಡದು ಈ ಸೃಷ್ಟಿಯಲ್ಲಿ ಯಾವುದೂ ಇಲ್ಲ. ತಾಯಿ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಾಗಿದ್ದಾಳೆ. ಪ್ರಾಣ ಬೇಕಾದರೂ ಬಿಡುತ್ತಾಳೆ. ಹೀಗಿರುವಾಗ ತನ್ನ ಪ್ರೀತಿಯ ಮಗ ಕಣ್ಣೆದುರಿಗೆ ಸತ್ತರೆ ಆ ತಾಯಿಯ ಹೃದಯಕ್ಕೆ ಎಷ್ಟು ನೋವಾಗಬೇಡ. ಇದೇ ನೋವಿನಲ್ಲಿ ತಾಯಿಯೊಬ್ಬಳು ಪ್ರಾಣ ಬಿಟ್ಟಿದ್ದಾಳೆ.

ಈ ಹೃದಯವಿದ್ರಾವಕ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ವೀಣವಂಕ ಮಂಡಲದ ಗೊಲ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತ ತಾಯಿಯನ್ನು ಲಚಮ್ಮ ಎಂದು ಗುರುತಿಸಲಾಗಿದೆ.

ತಾಯಿ ಲಚಮ್ಮ ತನ್ನ ಮಗನ ಮರಣದ ನಂತರ ತುಂಬಾ ಖಿನ್ನತೆಗೆ ಒಳಗಾಗಿದ್ದರು. ಪ್ರತಿದಿನ ಮಗನ ಸಮಾಧಿಗೆ ಹೋಗಿ ಅಳುತ್ತಾ ತಮ್ಮ ಜೀವನವನ್ನು ಕಳೆಯುತ್ತಿದ್ದರು. ಹೀಗಿರುವಾಗ ಕಳೆದ ವಾರ ಮಗನ ಸಮಾಧಿ ಬಳಿ ಕಾರ್ ಪಾಲಿಶ್ ಲಿಕ್ವಿಡ್ ಕುಡಿದು ಲಚಮ್ಮ ಆತ್ಮಹತ್ಯೆಗೆ ಯತ್ನಿಸಿದರು.

ಲಿಕ್ವಿಡ್​ ಕುಡಿದು ಅಸ್ವಸ್ಥಗೊಂಡಿದ್ದ ಲಚಮ್ಮರನ್ನು ಕರೀಂನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾವಿಗೆ ಶರಣಾಗಿದ್ದಾರೆ. ಮಗನ ಸಾವಿನ ದುಃಖ ತಡೆಯಲಾರದೇ ತಾಯಿಯು ಕೂಡ ಸಾವಿನ ಹಾದಿ ಹಿಡಿದಿದ್ದು, ಈ ಸುದ್ದಿ ಕೇಳಿ ಗ್ರಾಮಸ್ಥರು ದುಃಖಿತರಾಗಿದ್ದಾರೆ. ಇನ್ನು ಲಚಮ್ಮ ಅವರ ಮೊಮ್ಮಗ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಾಸ್ತವವಾಗಿ, ಸೃಷ್ಟಿಯಲ್ಲಿ ಯಾವುದಾದರೂ ಶುದ್ಧ ಪ್ರೀತಿ ಇದ್ದರೆ ಅದು ತಾಯಿಯ ಪ್ರೀತಿ ಮಾತ್ರ. ಏಕೆಂದರೆ, ಆ ಪ್ರೀತಿಯಲ್ಲಿ ಯಾವುದೇ ಸ್ವಾರ್ಥವಿಲ್ಲ. ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳಿಗಾಗಿ ಬದುಕುತ್ತಾಳೆ. ಆಕೆ ತಿನ್ನುತ್ತಾಳೋ ಇಲ್ಲವೋ, ತನ್ನ ಮಕ್ಕಳನ್ನು ಮಾತ್ರ ಹಸಿವಿನಿಂದ ಇರಲು ಬಿಡುವುದಿಲ್ಲ. ವೀಣವಂಕ ಮಂಡಲದ ಗೊಲ್ಲಪಲ್ಲಿ ಗ್ರಾಮದಲ್ಲಿ ನಡೆದ ಈ ಘಟನೆಯು ತಾಯಿಯ ಪ್ರೀತಿಗೆ ತಾಜಾ ಸಾಕ್ಷಿಯಾಗಿದೆ. (ಏಜೆನ್ಸೀಸ್​)