ನ್ಯೂಸ್

ನಿಮ್ಮ ಮಗಳ ಅಶ್ಲೀಲ ವಿಡಿಯೋ ಇದೆ…ಸೈಬರ್​​​ ಕ್ರಿಮಿನಲ್​ಗಳ ಬೆದರಿಕೆ, ನಿಂತೇ ಹೋಯ್ತು ತಾಯಿಯ ಹೃದಯ ಬಡಿತ | Heart Attack

ಲಖನೌ: ಉತ್ತರ ಪ್ರದೇಶದ ಆಗ್ರಾದಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಸೈಬರ್ ಕ್ರಿಮಿನಲ್​ಗಳ ಸುಳ್ಳು ಬೆದರಿಕೆಗೆ ಹೆದರಿದ ಮಹಿಳೆಯೊಬ್ಬಳು ಹೃದಯಾಘಾತ ( Heart Attack ) ದಿಂದ ಸಾವಿಗೀಡಾಗಿದ್ದಾರೆ. ನಿಮ್ಮ ಮಗಳು ಸೆಕ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾಳೆ. ಕೂಡಲೇ 1 ಲಕ್ಷ ರೂ. ಹಣ ವರ್ಗಾವಣೆ ಮಾಡದಿದ್ದರೆ ನಿಮ್ಮ ಮಗಳ ವಿಡಿಯೋವನ್ನು ಬಿಡುಗಡೆ ಮಾಡುತ್ತೇವೆ ಎಂದು ಬ್ಲಾಕ್​ಮೇಲ್​ ಮಾಡಿದ್ದರಿಂದ ಆತಂಕಗೊಂಡ ಮಹಿಳೆ ಹೃದಯಾಘಾತದಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಮೃತಳನ್ನು ಮಾಲತಿ ವರ್ಮಾ ಎಂದು ಗುರುತಿಸಲಾಗಿದೆ. ಈಕೆ ಜಗದೀಶಪುರ್​ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷ್ ನಗರದ ನಿವಾಸಿ. ಈಕೆ ಅಚ್ಚನೇರಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೆ.30ರಂದು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಕೆಯ ಮೊಬೈಲ್‌ಗೆ ವಾಟ್ಸ್​ಆ್ಯಪ್​ ಕರೆ ಬಂದಿತ್ತು. ಆರೋಪಿಯ ಡಿಪಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯ ಭಾವಚಿತ್ರವಿತ್ತು. ನಿಮ್ಮ ಮಗಳು ಸೆಕ್ಸ್ ದಂಧೆಯಲ್ಲಿ ತೊಡಗಿದ್ದಾಳೆ. ಆದರೆ, ನಾವಿನ್ನೂ ಪ್ರಕರಣವನ್ನು ದಾಖಲಿಸಿಲ್ಲ. ನಿಮ್ಮ ಮಗಳ ಫೋಟೋಗಳು ವೈರಲ್ ಆಗಬಾರದು ಎಂಬ ಉದ್ದೇಶದಿಂದ ಕರೆ ಮಾಡಿದ್ದೇನೆ. ಒಂದು ಲಕ್ಷ ರೂಪಾಯಿ ಕಳುಹಿಸಿದರೆ ಆಕೆಯನ್ನು ಬಿಡುಗಡೆ ಮಾಡುತ್ತೇನೆ ಎಂದು ಆರೋಪಿ ಹೇಳಿದ್ದಾನೆ.

ಆರೋಪಿಗಳು ತಮ್ಮದೇಯಾದ ನಂಬರ್ ಕಳುಹಿಸಿದ್ದು, 15 ದಿನಗಳಲ್ಲಿ ಒಂದು ಲಕ್ಷ ರೂ. ಕಳುಹಿಸಲು ಹೇಳಿದ್ದಾರೆ. ಒಂದು ವೇಳೆ ಹಣ ಕಳುಹಿಸದಿದ್ದರೆ ನಿಮ್ಮ ಮಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಮಾಲತಿ ವರ್ಮಾ, ತನ್ನ ಮಗ ದೀಪಾಂಶುಗೆ ಕರೆ ಮಾಡಿ ಆರೋಪಿಗಳ ಕೊಟ್ಟ ನಂಬರ್​ಗೆ 1 ಲಕ್ಷ ರೂ. ಹಣ ಹಾಕಲು ಹೇಳಿದರು. ಇದೇ ಸಂದರ್ಭದಲ್ಲಿ ಮಾಲತಿ ವರ್ಮಾರನ್ನು ಸೈಬರ್​ ಕ್ರಿಮಿನಲ್​ಗಳು ಸುಮಾರು ಅರ್ಧ ಗಂಟೆ ಡಿಜಿಟಲ್ ಬಂಧನದಲ್ಲಿಟ್ಟಿದ್ದರು.

ಆದರೆ, ನಂಬರ್ ನೋಡಿ ಮಾಲತಿ ಮಗ ದೀಪಾಂಶುಗೆ ಅನುಮಾನ ಬಂದಿತ್ತು. ಈ ನಂಬರ್ ನಮ್ಮ ದೇಶಕ್ಕೆ ಸೇರಿದ್ದಲ್ಲ ಅನ್ನಿಸುತ್ತೆ, ನಂಬರ್ ತಪ್ಪಾಗಿದೆ ಎಂದು ತಾಯಿ ಮಾಲತಿ ವರ್ಮಾಗೆ ಹೇಳುತ್ತಾರೆ. ಬಳಿಕ ಫೋನ್ ಮಾಡಿ ವಿಷಯವನ್ನೆಲ್ಲ ತನ್ನ ಮಗನಿಗೆ ತಿಳಿಸುತ್ತಾಳೆ. ತನ್ನ ಮಗಳು ಸೆಕ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾಳಾ ಎಂದು ಅವರು ಭಯಪಡುತ್ತಾರೆ. ಇತ್ತ ಮಗ ದೀಪಾಂಶು ತನ್ನ ಇಬ್ಬರು ಸಹೋದರಿಯರನ್ನು ವಿಚಾರಿಸಿದಾಗ ಒಬ್ಬರು ಕಾಲೇಜಿನಲ್ಲಿ ಮತ್ತು ಇನ್ನೊಬ್ಬರು ಮಾರುಕಟ್ಟೆಯಲ್ಲಿ ಇರುವುದು ಕಂಡುಬರುತ್ತದೆ. ಇಬ್ಬರನ್ನು ತಾಯಿಯೊಂದಿಗೆ ಮಾತನಾಡಿಸುತ್ತಾರೆ. ಆದರೆ, ಸೈಬರ್​ ಕ್ರಿಮಿನಲ್​ಗಳ ಬೆದರಿಕೆಯಿಂದ ತೀವ್ರ ಆಘಾರಕ್ಕೆ ಒಳಗಾಗಿದ್ದ ಮಾಲತಿ ವರ್ಮಾ, ಮನೆಗೆ ಬಂದ ನಂತರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಹೆಚ್ಚುತ್ತಿದೆ ಡಿಜಿಟಲ್​ ಅರೆಸ್ಟ್​

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧದ ಸ್ವರೂಪಗಳು ಬದಲಾಗಿದ್ದು, ವ್ಯಾಪ್ತಿಯೂ ಹೆಚ್ಚಿದೆ. ವಂಚಕರಿಂದ ಡಿಜಿಟಲ್ ಅರೆಸ್ಟ್​ನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮತ್ತೊಂದೆಡೆ, ಕೆಲಸ ಕೊಡಿಸುವ, ಹೂಡಿಕೆಗೆ ಹೆಚ್ಚು ರಿಟರ್ನ್ಸ್ ನೀಡುವ, ಕಡಿಮೆ ಬಡ್ಡಿಗೆ ಸಾಲ ನೀಡುವ ಆಮಿಷವೊಡ್ಡಿ, ಜನರಿಂದ ಮಾಹಿತಿ ಸಂಗ್ರಹಿಸುತ್ತಿರುವ ದುರುಳರು, ಅವರನ್ನು ಸೈಬರ್ ವಂಚನೆಯ ಜಾಲಕ್ಕೆ ಸುಲಭವಾಗಿ ಸಿಲುಕಿಸುತ್ತಿದ್ದಾರೆ. ಹಿಂದೆ, ದೈಹಿಕ ಅಪರಾಧಗಳು ಪೊಲೀಸರಿಗೆ ಸವಾಲಾಗಿದ್ದವು, ಈಗ ಬೌದ್ಧಿಕ ಅಪರಾಧಗಳು ಹೊಸ ಸವಾಲಾಗಿ ಪರಿಣಮಿಸಿದ್ದು, ಪರಿಹಾರದ ಕ್ರಮಗಳು ಕೂಡ ಪರಿಣಾಮಕಾರಿಯಾಗಿಸಬೇಕಾದ ಅಗತ್ಯವಿದೆ. ಪೊಲೀಸ್ ಇಲಾಖೆ ಸೈಬರ್ ಅಪರಾಧಗಳ ಕುರಿತಂತೆ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇಂಥ ಅರಿವು ಮೂಡಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದ್ದು, ಬೆಂಗಳೂರು ಮಾತ್ರವಲ್ಲದೆ ದ್ವಿತೀಯ ದರ್ಜೆ ನಗರಗಳಿಗೂ ವಿಸ್ತರಿಸಬೇಕಿದೆ. ಆದರೆ, ಮತ್ತೊಂದೆಡೆ ಸೈಬರ್ ವಂಚಕರು ಹೊಸ ಹೊಸ ದಾರಿಗಳ ಮೂಲಕ ಜನರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ ಮತ್ತು ಈ ವಂಚಕರು ಹೆಚ್ಚಾಗಿ ವಿದೇಶಗಳಲ್ಲಿ ಕುಳಿತು ಇಂಥ ಕೃತ್ಯಗಳನ್ನು ನಡೆಸುವುದರಿಂದ ಅವರನ್ನು ಪತ್ತೆ ಹಚ್ಚುವುದು ಕಠಿಣವಾಗಿ ಪರಿಣಮಿಸಿದೆ. ಒಂದು ವೇಳೆ ತಂತ್ರಜ್ಞಾನದ ನೆರವಿನಿಂದ ಪತ್ತೆ ಹಚ್ಚಿದರೂ, ಅವರನ್ನು ಭಾರತಕ್ಕೆ ಕರೆತಂದು ಕಾನೂನು ಕ್ರಮಕ್ಕೆ ಒಳಪಡಿಸುವುದು, ಸವಾಲಿನದ್ದಾಗಿದೆ. (ಏಜೆನ್ಸೀಸ್​)