ನ್ಯೂಸ್

ಆರೋಗ್ಯಕರ ಜೀವನವೇ ಮಧುಮೇಹಕ್ಕೆ ಔಷಧ: ಕ್ಲಬ್​ಹೌಸ್ ಸಂವಾದದಲ್ಲಿ ಆಯುರ್ವೆದ-ಅಲೋಪಥಿ ವೈದ್ಯರ ಸಲಹೆ

ವಿಶ್ವ ಮಧುಮೇಹ ದಿನದ ಹಿನ್ನೆಲೆಯಲ್ಲಿ ‘ಮಧುಮೇಹ ನಿಯಂತ್ರಣ ಹೇಗೆ?’ ಎಂಬ ವಿಷಯದ ಕುರಿತು ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ಶನಿವಾರ ಹಮ್ಮಿಕೊಂಡಿದ್ದ ಕ್ಲಬ್​ಹೌಸ್ ಸಂವಾದದಲ್ಲಿ ಆಯುರ್ವೆದ ತಜ್ಞ ಡಾ. ವೆಂಕಟರಮಣ ಹೆಗಡೆ ಹಾಗೂ ಅಲೋಪಥಿ ತಜ್ಞರಾದ ಡಾ. ಆರ್. ಅನಿಲ್ ಕುಮಾರ್ ಅವರು ಪಾಲ್ಗೊಂಡು ಮಧುಮೇಹಕ್ಕೆ ಕಾರಣ, ಚಿಕಿತ್ಸೆ, ನಿಯಂತ್ರಣ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಮಧುಮೇಹ ಬಂದರೆ ಸಮಸ್ಯೆ ಇಲ್ಲ. ಆದರೆ, ಆಹಾರಕ್ರಮ, ಉತ್ತಮ ಜೀವನಶೈಲಿ ಹಾಗೂ ನಿಯಮಿತ ಔಷಧ-ತಪಾಸಣೆ ಮೂಲಕ ಯಾರು ಎಚ್ಚರಿಕೆಯಿಂದ ಇರುತ್ತಾರೋ ಅಂತಹವರು ದೀರ್ಘಕಾಲ ಆರೋಗ್ಯಕರ ಜೀವನ ನಡೆಸಿರುವುದು ಅಧ್ಯಯನದಿಂದ ದೃಢಪಟ್ಟಿದೆ. ಆದ್ದರಿಂದ ಮಧುಮೇಹ ನಿಯಂತ್ರಣಕ್ಕೆ ಆರೋಗ್ಯಕರ ಜೀವನಶೈಲಿ ಬಹಳ ಮುಖ್ಯವಾಗುತ್ತದೆ. ಯಾರು ಮಧುಮೇಹವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಾರೋ ಅಂತಹವರು ಆತಂಕ ಪಡುವ ಅಗತ್ಯವಿಲ್ಲ. ಹಾಗೆಯೇ ಯಾರು ಹತೋಟಿ ತಪು್ಪತ್ತಾರೋ ಅವರಿಗೆ ಅಪಾಯವೂ ತಪ್ಪಿದ್ದಲ್ಲ ಎಂದು ಆಯುರ್ವೆದ ತಜ್ಞ ಡಾ. ವೆಂಕಟರಮಣ ಹೆಗಡೆ ಎಚ್ಚರಿಸಿದ್ದಾರೆ.

ಭಾರತದಲ್ಲಿ ಟೈಪ್-1 ಡಯಾಬಿಟೀಸ್ ಹೊಂದಿರುವವರ ಸಂಖ್ಯೆ 1.79 ಲಕ್ಷ (ಶೇ.1 ರಿಂದ 2), ಟೈಪ್-2 ಡಯಾಬಿಟೀಸ್ ಹೊಂದಿದವರು 77 ದಶಲಕ್ಷ ಮಂದಿ ಇದ್ದಾರೆ. ಆದರೆ ಅರಿವಿನ ಕೊರತೆ ಹಾಗೂ ನಿರ್ಲಕ್ಷ್ಯದಿಂದಾಗಿ ಬಹಳಷ್ಟು ಮಂದಿ ಮಧುಮೇಹ ಗಂಭೀರ ಸ್ಥಿತಿ ತಲುಪಿದಾಗ ಬರುತ್ತಾರೆ. ಹಾಗಾಗಿ ಈ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ಹಾಗೂ ಸರ್ಕಾರದಿಂದ ಎಲ್ಲರಿಗೂ ಉಚಿತ ಚಿಕಿತ್ಸೆ ಹಾಗೂ ಔಷಧ ಒದಗಿಸುವ ಕೆಲಸವಾಗಬೇಕು ಎಂದು ಕರ್ನಾಟಕ ಇನ್​ಸ್ಟಿಟ್ಯೂಟ್ ಆಫ್ ಎಂಡೋಕ್ರೖೆನಾಲಜಿ ಆಂಡ್ ರಿಸರ್ಚ್​ನ ಮಧುಮೇಹ ವಿಭಾಗದ ಮುಖ್ಯಸ್ಥರಾದ ಡಾ.ಆರ್.ಅನಿಲ್ ಕುಮಾರ್ ಹೇಳಿದರು.

ಇಂದು (ನ.14) ವಿಶ್ವ ಮಧುಮೇಹ ದಿನವನ್ನು ಮಾತ್ರ ಆಚರಿಸುತ್ತಿಲ್ಲ. ಇನ್ಸುಲಿನ್ ಆವಿಷ್ಕಾರವಾಗಿ 100ನೇ ವರ್ಷದ ಆಚರಣೆಯೂ ಆಗಿದೆ. ಹಾಗಾಗಿ ಈ ದಿನ ಬಹಳ ಮಹತ್ವ ಪಡೆದುಕೊಂಡಿದೆ. ಇನ್ಸುಲಿನ್ ಕಂಡು ಹಿಡಿದ ಫ್ರೆಡೆರಿಕ್ ಬ್ಯಾಂಟಿಂಗ್ ಅವರ ಜನ್ಮದಿನದಂದೇ ವಿಶ್ವ ಮಧುಮೇಹ ದಿನ ಆಚರಿಸಲಾಗುತ್ತಿದೆ.

ಉಪವಾಸ ಸಲ್ಲ: ಮಧುಮೇಹಿಗಳು ಉಪವಾಸ ಮಾಡುವುದು ಒಳ್ಳೆಯದಲ್ಲ. ಊಟದ ಬದಲಿಗೆ ಹಣ್ಣು, ತರಕಾರಿ ಸೇವಿಸಬಹುದು. ಆದರೆ ಯಾವುದೇ ಕಾರಣಕ್ಕೂ ಉಪವಾಸ ಮಾಡಬಾರದು.

ನಿಯಂತ್ರಣಕ್ಕೆ ಮೂರು ಸೂತ್ರಗಳು

  • ಯೋಗ, ನಡಿಗೆ ಅಥವಾ ವ್ಯಾಯಾಮ.
  • ಆರೋಗ್ಯಕರ ಆಹಾರಕ್ರಮ.
  • ವೈದ್ಯರ ಸಲಹೆಯಂತೆ ಔಷಧ ಸೇವನೆ ಹಾಗೂ ನಿಯಮಿತ ಆರೋಗ್ಯ ತಪಾಸಣೆ (ರಕ್ತದಲ್ಲಿ ಸಕ್ಕರೆ ಅಂಶ, ಅಧಿಕ ರಕ್ತದ ಒತ್ತಡ, ಕೊಲೆಸ್ಟ್ರಾಲ್ ಪರೀಕ್ಷೆ)

ಎಚ್ಚರಿಕೆ ವಹಿಸಿ

  • ಮಧುಮೇಹವನ್ನು ನಿಯಂತ್ರಿಸಬಹುದು. ಆದರೆ, ಪೂರ್ತಿ ಗುಣ ಮಾಡಲು ಸಾಧ್ಯವಿಲ್ಲ.
  • ಟೈಪ್-1 ಮಧುಮೇಹಿಗಳಿಗೆ ಇನ್ಸುಲಿನ್ ಚುಚ್ಚುಮದ್ದು ಅತ್ಯಾವಶ್ಯಕ.
  • ರಕ್ತದಲ್ಲಿ ಸಕ್ಕರೆಅಂಶ, ರಕ್ತದ ಒತ್ತಡ ಹಾಗೂ ಕೊಬ್ಬಿಂನಾಶ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
  • ಮಧುಮೇಹಿಗಳಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾದರೂ ಅಪಾಯ.
  • 30 ವರ್ಷ ಮೇಲ್ಪಟ್ಟವರು ಪ್ರತಿ ವರ್ಷ ಒಮ್ಮೆ, 35 ವರ್ಷ ಮೇಲ್ಪಟ್ಟವರು ವರ್ಷಕ್ಕೆ ಎರಡು ಬಾರಿ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.
  • ಆಹಾರಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹಣ್ಣು, ತರಕಾರಿ, ಸೊಪು್ಪ, ಒಣಹಣ್ಣುಗಳನ್ನು ಸೇವಿಸುವುದು ಉತ್ತಮ.

ಎರಡು ವಿಧಗಳು

  • ಟೈಪ್-1: ಡಯಾಬಿಟೀಸ್ ಇದು ಹೆಚ್ಚಾಗಿ ಸಣ್ಣ ವಯಸ್ಸಿನವರಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ಹದಿಹರೆಯದವರಲ್ಲೂ ಕಾಣಬಹುದು. ಇವರ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯೇ ಆಗುವುದಿಲ್ಲ. ಹಾಗಾಗಿ ಇಂತಹವರಿಗೆ ಇನ್ಸುಲಿನ್ ಒಂದೇ ಪರಿಹಾರ ಹಾಗೂ ಅನಿವಾರ್ಯ ಕೂಡ.
  • ಟೈಪ್-2: ಡಯಾಬಿಟೀಸ್ ಹೊಂದಿದವರಲ್ಲಿ ಇನ್ಸುಲಿನ್ ಬಿಡುಗಡೆ ಆಗುತ್ತಿರುತ್ತದೆ. ಆದರೆ ಅದು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಇದು ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟವರಲ್ಲಿ ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಇನ್ನೂ ಕಡಿಮೆ ವಯಸ್ಸಿನವರಲ್ಲೂ ಕಾಣಬಹುದಾಗಿದೆ. ಇಂತಹವರು ಮೊದಲಿಗೆ ಮಾತ್ರ ಇನ್ಸುಲಿನ್ ಅವಲಂಬಿಸುತ್ತಾರೆ. ಆದರೆ ಯಾರು ಸರಿಯಾದ ಆಹಾರಕ್ರಮ, ವ್ಯಾಯಾಮ ಹಾಗೂ ನಿಯಮಿತ ಚಿಕಿತ್ಸೆ ಪಡೆದು ಔಷಧ ಸೇವಿಸುತ್ತಾರೋ ಅಂತಹವರು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಮಧುಮೇಹ ಪತ್ತೆ ಹೇಗೆ?

ಊಟಕ್ಕೆ ಮುಂಚೆ ರಕ್ತದಲ್ಲಿ ಸಕ್ಕರೆ ಅಂಶ 126 ಎಂಜಿ ಪರ್ ಡಿಲ್ ಅದಕ್ಕಿಂತ ಹೆಚ್ಚಿದ್ದರೆ, ಎಚ್​ಬಿ ಎ1ಸಿ ಮೂರು ತಿಂಗಳ ಸರಾಸರಿ ಸಕ್ಕರೆ ಅಂಶ 6.5ಗಿಂತ ಹೆಚ್ಚಿದ್ದರೆ ಅಂತಹವರಲ್ಲಿ ಮಧುಮೇಹ ಇರುತ್ತದೆ. ಯಾರಲ್ಲಿ ಊಟಕ್ಕೆ ಮುಂಚೆ ರಕ್ತದಲ್ಲಿ ಸಕ್ಕರೆ ಅಂಶ 70-100 ಎಂಜಿ ಪರ್ ಡಿಲ್ ಹಾಗೂ ಊಟದ ನಂತರ 140 ಎಂಜಿ ಪರ್ ಡಿಲ್ ಇರುತ್ತದೋ ಅವರು ಆರೋಗ್ಯವಂತರು. ಮಧುಮೇಹದ ಸಮಸ್ಯೆ ಇರುವುದಿಲ್ಲ. ಮಧುಮೇಹಿಗಳು ಆಹಾರಕ್ರಮ, ಯೋಗ ಹಾಗೂ ಚಿಕಿತ್ಸೆ ಮತ್ತು ಔಷಧ ಸೇವನೆ ಮೂಲಕ ಎಚ್​ಬಿ ಎ1ಸಿ 6.5 ಇರಬೇಕು. ರಕ್ತದ ಒತ್ತಡ 140/90 ಎಂ.ಎಂ. ಎಲ್​ಡಿಎಲ್ ಆಥವಾ ಬ್ಯಾಡ್ ಕೊಲೆಸ್ಟ್ರಾಲ್ 100 ಎಂಜಿ ಪರ್ ಡಿಎಲ್​ಗಿಂತ ಕಡಿಮೆ ಇರಬೇಕು. ಹೀಗೆ ಯಾರು ನಿಯಂತ್ರಣದಲ್ಲಿಟ್ಟುಕೊಳ್ಳುತ್ತರೋ ಅಂತಹವರಲ್ಲಿ ಹೃದಯ, ಕಿಡ್ನಿ, ಕಣ್ಣು, ನರ ಹಾನಿಯಾಗದಂತೆ ತಡೆಗಟ್ಟಬಹುದು.

ಮಧುಮೇಹದ ಪ್ರಮುಖ ರೋಗಲಕ್ಷಣಗಳು ಏನು?

-ಅತಿಯಾದ ಮೂತ್ರವಿಸರ್ಜನೆ, ಬಾಯಾರಿಕೆ, ಹಸಿವು, ದೃಷ್ಟಿ ಮಂಜಾಗುವಿಕೆ, ತೂಕ ಇಳಿಕೆಯಾಗುವುದು, ಬೆವರು, ಸುಸ್ತು, ಗಾಯ ಆದಲ್ಲಿ ಬೇಗ ವಾಸಿಯಾಗದಿರುವುದು, ಗಡಸುಚರ್ಮ, ಕೈ ಕಾಲುಗಳು ಜುಮ್ ಎನ್ನುವುದು ಪ್ರಮುಖ ಲಕ್ಷಣಗಳಾಗಿವೆ. ಆದರೆ ಶೇ.50 ಮಂದಿಯಲ್ಲಿ ಈ ಯಾವ ಲಕ್ಷಣಗಳು ಇರುವುದೇ ಇಲ್ಲ. ಅಂತಹವರಿಗೆ ಸಾಮಾನ್ಯ ರಕ್ತ ಪರೀಕ್ಷೆಯಿಂದ ಪತ್ತೆ ಆಗುತ್ತದೆ. ಹಾಗಾಗಿ 35 ವರ್ಷ ಮೇಲ್ಪಟ್ಟವರು ವರ್ಷಕ್ಕೆ 2 ಬಾರಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಲಾಕ್​ಡೌನ್ ಸಂದರ್ಭದಲ್ಲಿ ಮಧುಮೇಹ ಪ್ರಕರಣ ಹೆಚ್ಚಾಗಲು ಕಾರಣವೇನು?

-ಹೌದು, ದುರ್ದೈವದ ಸಂಗತಿ ಎಂದರೆ ದೇಶ ಈಗಾಗಲೇ ಮಧುಮೇಹದ ರಾಜಧಾನಿ ಆಗುತ್ತಿದೆ. ಲಾಕ್​ಡೌನ್ ಸಂದರ್ಭದಲ್ಲಿ ಇದು ಇನ್ನಷ್ಟು ಹೆಚ್ಚಿದೆ. ಹೆಚ್ಚು ಕಾಲ ಮನೆಯಲ್ಲೇ ಇದ್ದು, ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಗಳಿಲ್ಲ, ಅನಿಯಮಿತ ಆಹಾರ ಸೇವನೆಯಿಂದ ಲಾಕ್​ಡೌನ್ ಸಂದರ್ಭದಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚಾಗಿವೆ. ಇದಲ್ಲದೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಮೇಳೆ ಹೆಚ್ಚು ಸ್ಟಿರಾಯಿಡ್ ಬಳಕೆಯಿಂದಲೂ ಮಧುಮೇಹ ಪ್ರಕರಣಗಳು ಹೆಚ್ಚಾಗಿವೆ.

ಮಧುಮೇಹ ಯಾರಲ್ಲಿ ಬರುತ್ತದೆ? ಕಾರಣವೇನು?

-ಬದಲಾದ ಜೀವನಶೈಲಿ, ಸರಿಯಾದ ಆಹಾರಕ್ರಮ, ದೈಹಿಕ ಶ್ರಮದ ಶಿಸ್ತು ಇಲ್ಲದವರಲ್ಲಿ ಮಧುಮೇಹ ಬರುವ ಸಾಧ್ಯತೆಗಳು ಹೆಚ್ಚು. ಇದಲ್ಲದೆ ವಂಶವಾಹಿನಿಯಿಂದಲೂ ಮಧುಮೇಹ ಬರುತ್ತದೆ. ಹಿಂದೆಲ್ಲ 60-70 ವರ್ಷ ಮೇಲ್ಪಟ್ಟವರಲ್ಲಿ ಬರುತ್ತಿತ್ತು. ಇಂದು ಯುವಜನರಲ್ಲೂ ಬರುತ್ತಿದೆ. ಕಾರಣ ಜೀವನಕ್ರಮದಲ್ಲಿನ ಬದಲಾವಣೆ. ನಗರ ಪ್ರದೇಶ ಅಲ್ಲದೆ ಗ್ರಾಮೀಣ ಪ್ರದೇಶದ ಜನರಲ್ಲೂ ಮಧುಮೇಹ ಹೆಚ್ಚುತ್ತಿದೆ. ಹಾಗಾಗಿ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ರಾಜ್ಯದ ಎಲ್ಲ ಭಾಗಗಳಲ್ಲೂ ಮಧುಮೇಹ ಆರೈಕೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವ ಮೂಲಕ ದೇಶವನ್ನು ಮಧುಮೇಹ ಅರೈಕೆಯ ರಾಜಧಾನಿಯನ್ನಾಗಿ ಮಾಡಬೇಕಿದೆ.

ಹೀಗಿರಲಿ ಆಹಾರ ಪದ್ಧತಿ

ಆಹಾರದಲ್ಲಿ ಕಾರ್ಬೆಹೈಡ್ರೇಟ್ಸ್ ಪ್ರಮಾಣ ಕಡಿಮೆಗೊಳಿಸಿ ನಿಧಾನವಾಗಿ ಜೀರ್ಣವಾಗುವ ಅಹಾರವನ್ನು ತೆಗೆದುಕೊಳ್ಳಬೇಕು. ಅದರಂತೆ ಹೆಚ್ಚು ಪ್ರೋಟಿನ್ ಹಾಗೂ ಫೈಬರ್​ಯುುಕ್ತ ಆಹಾರ ಸೇವಿಸಬೇಕು. ಸಿಹಿಪದಾರ್ಥಗಳನ್ನು ತ್ಯಜಿಸುವುದು ಉತ್ತಮ. ಎಲ್ಲ ಬಗೆಯ ದ್ವಿದಳ ಧಾನ್ಯಗಳು, ಹಣ್ಣು ಮತ್ತು ತರಕಾರಿ ಹಾಗೂ ಒಣಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಸಿಹಿಅಂಶ ಹೆಚ್ಚಿರುವ ಮಾವು, ಹಲಸು, ಸಪೋಟದಂತಹ ಹಣ್ಣುಗಳನ್ನು ತಿನ್ನುವುದಾದರೆ ಒಂದು ಹೊತ್ತಿನ ಊಟ ತ್ಯಜಿಸಿ ತಿನ್ನಬಹುದು. ಬೆಳಗ್ಗೆ ಎದ್ದಾಗ ನೀರು ಕುಡಿಯಬೇಕು. ಮೆಂತ್ಯೆಕಾಳನ್ನು ನೆನೆಸಿ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಮಜ್ಜಿಗೆಯೊಂದಿಗೆ ದಿನಕ್ಕೆ ಎರಡು ಬಾರಿ ಸೇವಿಸುವುದು ಉತ್ತಮ. ಗೋಧಿ, ರಾಗಿ, ಜೋಳ, ಅಕ್ಕಿ ಪ್ರಮಾಣ ಕಡಿಮೆ ಮಾಡಿ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ತರಕಾರಿ, ಸೊಪು್ಪ, ಸಕ್ಕರೆ ಅಂಶ ಕಡಿಮೆ ಇರುವ ಹಣ್ಣುಗಳನ್ನು (ಸೇಬು, ಕಿತ್ತಳೆ, ಮೂಸಂಬಿ, ಪರಂಗಿ, ಕರಬೂಜ ಇತ್ಯಾದಿ) ಸೇವಿಸುವುದು ಒಳ್ಳೆಯದು. ಮಾಂಸಹಾರಿಗಳಾದರೆ ಬೇಯಿಸಿದ ಕೋಳಿಮಾಂಸ, ಮೀನು ಹಾಗೂ ಮೊಟ್ಟೆಯ ಬಿಳಿ ಭಾಗವನ್ನು ಸೇವಿಸಬಹುದು. ಕುರಿ ಮೇಕೆ ಮಾಂಸ ಉತ್ತಮವಲ್ಲ. ಎಣ್ಣೆಯಲ್ಲಿ ಕರಿದ ಪದಾರ್ಥ ಸೇವಿಸಬಾರದು. ತುಪ್ಪ, ತೆಂಗಿನಎಣ್ಣೆ ಬಳಕೆ ಉತ್ತಮ.