ನ್ಯೂಸ್

ನಾಲಿಗೆ-ಬಾಯಿ ಸರಿಯಿದ್ದರೆ ಆರೋಗ್ಯದ ರಕ್ಷಣೆ ಸುಲಭ

ನಾವೆಲ್ಲರೂ ಪ್ರತಿನಿತ್ಯ ಐದು ಜ್ಞಾನೇಂದ್ರಿಯಗಳು, ಐದು ಕಮೇಂದ್ರಿಯಗಳು, ಉಭಯಾತ್ಮಕ ಇಂದ್ರಿಯವಾದ ಮನಸ್ಸು, ಶರೀರದ ಅಂಗಾಂಗಗಳು, ದೇಹದ ಅವಯವಗಳು ಇವೆಲ್ಲವುಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಅನೇಕ ಚಟುವಟಿಕೆಗಳನ್ನು ಮಾಡುತ್ತಾ ಬದುಕನ್ನು ಸಾಗಿಸುತ್ತೇವೆ. ನಮ್ಮ ದೇಹ ಪ್ರಮುಖವಾಗಿ ಮೂರು ವಿಚಾರಗಳನ್ನು ದಿನಂಪ್ರತಿ ಎದುರಿಸಬೇಕಾಗುತ್ತದೆ. ಮೊದಲನೆಯದಾಗಿ ಉಸಿರಾಟದಿಂದ ಹೊರಗಿನ ವಾಯು ಸ್ವೀಕಾರ ಮಾಡಿ ಪ್ರಾಣಕ್ಕೆ ತ್ರಾಣ ನೀಡುವುದು. ಎರಡನೆಯದು ಕಾಲಕ್ಕೆ ಸರಿಯಾಗಿ ಆಹಾರ ಸೇವಿಸಿ ದೇಹದ ದೃಢತೆಗೆ ಬಲ ನೀಡುತ್ತೇವೆ. ಮೂರನೆಯದು ಜ್ಞಾನದ ವಿನಿಮಯ ಮಾಡುತ್ತ ದೈನಂದಿನ ವ್ಯವಹಾರ, ವಿಚಾರ ವಿಮರ್ಶೆ, ವಿದ್ಯಾ ಕಲಿಕೆ, ಅನುಭವಗಳ ಪ್ರಾಪ್ತಿ, ತಿಳಿವಳಿಕೆಯ ಹಂಚುವಿಕೆ, ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಇಲ್ಲಿ ಶ್ವಾಸಕೋಶ, ಮಿದುಳುಗಳಿಗೆ ಮುಖ್ಯ ಕೆಲಸ. ಶ್ವಾಸಕೋಶ ತನ್ನಪಾಡಿಗೆ ತಾನೇ ವಾಯುಸಂಚಾರ ಮಾಡಿಕೊಳ್ಳುತ್ತದೆ, ಪ್ರತ್ಯೇಕವಾಗಿ ನಮ್ಮ ವಿಶೇಷ ಗಮನವೇನೂ ಬೇಕಾಗುವುದಿಲ್ಲ. ಆಹಾರದ ವಿಚಾರದಲ್ಲಿ ನಾಲಿಗೆಯೇ ಮೊದಲು ಸಿಗುವ ದೇಹದ ಕಾರ್ಯಪಡೆ. ಜ್ಞಾನವಿನಿಮಯದ ವ್ಯವಹಾರದಲ್ಲೂ ಮಾತುಕತೆಗೆ ಮತ್ತೆ ನಾಲಿಗೆಯದೇ ಮುಖ್ಯಪಾತ್ರ. ಅನುದಿನವೂ ದೇಹಸೇರುವ ವಿವಿಧ ರೋಗಕಾರಕ ಬಾಹ್ಯ ಸೂಕ್ಷ್ಮಕ್ರಿಮಿಗಳಲ್ಲಿ ಪ್ರತಿಶತ ಎಂಬತ್ತರಷ್ಟು ಬಾಯಿಯ ಮೂಲಕವೇ ಶರೀರವನ್ನು ಪ್ರವೇಶಿಸುತ್ತವೆ ಎನ್ನುತ್ತದೆ ಆಧುನಿಕ ತಿಳುವಳಿಕೆ. ಹೀಗೆ ನಾಲಿಗೆ-ಬಾಯಿ ನೆಟ್ಟಗಿದ್ದರೆ ವ್ಯಕ್ತಿಯ ಆರೋಗ್ಯ ಸರಿಯಿಟ್ಟುಕೊಳ್ಳುವುದು ಸುಲಭವಾಗುತ್ತದೆ. ಬಾಯಿರುಚಿ ಒಂದು ಇಲ್ಲವೆಂದಾದರೆ ಹೇಳಲು ಚಿಕ್ಕ ತೊಂದರೆ ಎನಿಸಿದರೂ ಅದರಿಂದಾಗುವ ಅನಾಹುತ ದೊಡ್ಡದು. ಬಾಯಿರುಚಿ ಸರಿಯಿಲ್ಲದಿದ್ದರೆ ಹೊಟ್ಟೆಯೂ ಹಾಳಾಗುತ್ತದೆ, ಜೀರ್ಣಪ್ರಕ್ರಿಯೆ ಬುಡಮೇಲಾಗುತ್ತದೆ, ಮನಸ್ಸೂ ಕೆಡುತ್ತದೆ.

ಆಯುರ್ವೆದ ಈ ಅರೋಚಕ ರೋಗವನ್ನು ಐದು ವಿಧಗಳಾಗಿ ವರ್ಣಿಸಿ ಪರಿಹಾರವನ್ನೂ ಹೇಳಿದೆ. ವಾತಜ ಅರೋಚಕ: ಎದೆಭಾಗ ನೋವು, ಅಂಗಾಂಗಗಳಲ್ಲಿ ಸಂಕಟದ ಅನುಭವವಾಗುತ್ತದೆ. ಹಲ್ಲುಗಳು ಅತಿಸೂಕ್ಷ್ಮ ಸಂವೇದನೆ ಹೊಂದಿದ್ದು ಬಾಯಿಯಲ್ಲಿ ಯಾವ ರಸದ ಆಹಾರ ಸೇವಿಸಿದರೂ ಒಗರು ರುಚಿಯಿದ್ದಂತೆ ಭಾಸವಾಗುತ್ತದೆ. ಬಸ್ತಿ ಚಿಕಿತ್ಸೆ, ಆಮಲಕಿ ಚೂರ್ಣ ಫಲಪ್ರದ. ಶುಂಠಿ, ಬಜೆ, ಔಷಧೀಯ ತೈಲಗಳ ಉಪಯೋಗವೂ ಯೋಗ್ಯವಾದುದು. ಪಿತ್ತಜ ಅರೋಚಕ: ಬಾಯಿಯು ಬಿಸಿಯಾಗಿದ್ದು ರಸಗಳ ಸರಿಯಾದ ಅನುಭವವಾಗದೇ ಏನು ತಿಂದರೂ ಖಾರ, ಹುಳಿ ರುಚಿಯ ಅನುಭವ. ಬಾಯಾರಿಕೆ, ಹೀರಿದಂತೆ ನೋವು ಇದ್ದು ಬಾಯಿಯಲ್ಲಿ ದುರ್ಗಂಧವಿರುತ್ತದೆ. ವಿರೇಚನ ಚಿಕಿತ್ಸೆ, ಕರ್ಪರಾದಿ ಚೂರ್ಣ, ಶುಂಠಿ, ಮಾತುಲುಂಗ, ಮಾದಿಫಲಹಣ್ಣು, ಬೆಲ್ಲ, ಸೈಂಧವ ಲವಣ, ಕಲ್ಲುಸಕ್ಕರೆ, ಜೇನುತುಪ್ಪ, ತುಪ್ಪ, ಔಷಧೀಯ ತೈಲಗಳು ಚಿಕಿತ್ಸೆಯಲ್ಲಿ ಫಲ ನೀಡುತ್ತವೆ. ಕಫಜ ಅರೋಚಕ: ಉಪ್ಪು, ಸಿಹಿರುಚಿಯ ಅನುಭವ, ಕಫದ ವಾಕರಿಕೆ, ಕಫದಿಂದ ನಾಲಿಗೆ ಹಾಗೂ ಬಾಯಿ ಆವೃತವಾಗಿರುವುದು, ಅಂಟುಗುಣ, ಬಾಯಿ ತಣ್ಣಗಿದ್ದು ಭಾರವಾಗಿರುವಂತೆ ಭಾಸವಾಗುವುದು. ವಮನಕರ್ಮ ಚಿಕಿತ್ಸೆ, ಜೇನುತುಪ್ಪ, ಕಕ್ಕೆ ಗಿಡದ ಹೂವಿನ ಕಷಾಯ, ತಾಲೀಸಾದಿ ಚೂರ್ಣ, ಶುಂಠಿ, ಲಿಂಬೆಹಣ್ಣುಗಳು ಉಪಯುಕ್ತವಾಗಿವೆ. ತ್ರಿದೋಷಜ ಅರೋಚಕ: ವಿಭಿನ್ನ ರಸಗಳ ಅನುಭವ, ಅನೇಕ ವಿಧವಾದ ನೋವು, ನಾಲಿಗೆ ಲೇಪನವಾದ ಲಕ್ಷಣ, ಜಡತ್ವ, ಮೋಹ, ಚಿಂತೆ, ಗೊಂದಲಗಳಿಗೆ ಎಡೆಮಾಡಿಕೊಡುತ್ತದೆ. ಸರ್ವದೋಷಹರ ಚಿಕಿತ್ಸೆ ಯಶಸ್ಸು ನೀಡುತ್ತದೆ. ಆಗಂತುಜ ಅರೋಚಕ: ಬೇಸರ, ಭಯ, ಅತಿಯಾದ ಆಸೆ, ಕೋಪಗಳಿದ್ದು ಮನಸ್ಸಿಗೆ ಆಹಾರ ಹಿತವೆನಿಸುವುದಿಲ್ಲ, ಬಾಯಿರುಚಿ ಮಾತ್ರ ಸ್ವಾಭಾವಿಕ ರೀತಿಯಲ್ಲೇ ಇರುತ್ತದೆ. ಆಹಾರವು ಶುಚಿಯಾಗಿಲ್ಲದಂತೆ, ದುರ್ಗಂಧಿತವಾಗಿರುವಂತೆ ಅನಿಸುವುದು.

ಮಾನಸಿಕ ಕ್ಷೋಭೆಯ ಕಾರಣಗಳಿಂದಾಗಿ ಅರುಚಿ ಉಂಟಾಗಿದ್ದರೆ ಸಾಂತ್ವನದಿಂದ ಸಮಾಧಾನಪಡಿಸುವುದು ಮುಖ್ಯ. ಮನಸ್ಸಿಗೆ ಸಂತೋಷದಾಯಕ ಅನ್ನ ಪಾನೀಯಗಳನ್ನು ಯೋಜಿಸಬೇಕು. ಹರ್ಷವನ್ನು ಉಂಟುಮಾಡುವ ಪ್ರಕ್ರಿಯೆಗಳು ಪ್ರಯೋಜನಕಾರಿ. ಅರುಚಿಯನ್ನು ಸರಿಪಡಿಸಲು ಶರೀರ ಮನಸ್ಸುಗಳಿಗೆ ಒಗ್ಗುವ ಸಾತ್ಮ್ಯ ಆಹಾರ, ತಾನಿರುವ ಪ್ರದೇಶದಲ್ಲಿ ಬೆಳೆದ ದವಸಧಾನ್ಯ, ಹಣ್ಣುಗಳು ಹಾಗೂ ಆ ಸ್ಥಳದ ಆಹಾರ ವ್ಯಂಜನಗಳನ್ನು ಅಳವಡಿಸಬೇಕು. ಮುಖವನ್ನು ಆಗಾಗ ತೊಳೆಯುವುದೂ ಅನುಕೂಲಕರ. ಎಲ್ಲಕ್ಕಿಂತ ಮುಖ್ಯವಾಗಿ ಪಚನಶಕ್ತಿಯನ್ನು ಸರಿಗೊಳಿಸುವ ಆಹಾರ ವಿಹಾರಗಳು ಬಹುಮುಖ್ಯ. ಔಷಧೀಯ ಕಷಾಯಗಳನ್ನು ಬಾಯಿಯಲ್ಲಿ ಹಿಡಿದಿಟ್ಟುಕೊಳ್ಳುವುದು ಅಥವಾ ಅದರಿಂದ ಬಾಯಿ ಮುಕ್ಕಳಿಸುವ ಪ್ರಕ್ರಿಯೆಗಳಾದ ಕವಳ-ಗಂಡೂಷಗಳು ಲಾಭದಾಯಕ. ಸೌವರ್ಚಲ ಉಪ್ಪು, ಬಿಡಲವಣ, ಜಾಜಿಮಲ್ಲಿಗೆ, ಕಾಳುಮೆಣಸು, ಶ್ರೀಗಂಧ, ಕೇಸರಿ, ಬೆಟ್ಟದ ನೆಲ್ಲಿಕಾಯಿ, ಹಿಪ್ಪಲಿ, ಶುಂಠಿ, ಸಕ್ಕರೆ, ಜೇನುತುಪ್ಪ, ದಾಳಿಂಬೆ ಎಲೆಯ ರಸ ಇವುಗಳನ್ನೆಲ್ಲ ಬಳಸಿ ಕವಳ ದ್ರವ್ಯ ತಯಾರಿಸುವುದರಿಂದ ಬಾಯಿರುಚಿ ಸರಿಗೊಳಿಸಲು ಸಾಧ್ಯವಾಗುತ್ತದೆ. ಕೆಂಪಕ್ಕಿ, ಗೋಧಿ, ಅನ್ನದ ಗಂಜಿತಿಳಿ, ಹೆಸರುಬೇಳೆ ಕಟ್ಟು, ಎಳೆಮೂಲಂಗಿ, ಪಡುವಲಕಾಯಿ, ನುಗ್ಗೆಕಾಯಿ, ಸುವರ್ಣಗಡ್ಡೆ, ಮುರುಗಲ(ಪುನರ್ಪಳಿ) ಹಣ್ಣು, ಬಾಳೆಹಣ್ಣು, ದ್ರಾಕ್ಷಿಹಣ್ಣು, ದಾಳಿಂಬೆಹಣ್ಣು, ಬೋರೆ/ಬುಗುರಿ ಹಣ್ಣು, ಹಾಲು, ತುಪ್ಪ, ಮಜ್ಜಿಗೆ, ಶ್ರೀಖಂಡದಂತಹ ಸಿಹಿತಿಂಡಿಗಳು ಪಥ್ಯವಾಗಿದ್ದು ಬಾಯಿರುಚಿ ಹೆಚ್ಚಿಸಲು ಉಪಯುಕ್ತ. ಬಾಯಾರಿಕೆ, ಹಸಿವು, ತೇಗು, ಕಣ್ಣೀರು- ಈ ನಾಲ್ಕು ವೇಗಗಳನ್ನು ತಡೆಯುವುದು, ಮನಸ್ಸಿಗೆ ಹಾಗೂ ಶರೀರಕ್ಕೆ ಹಿತವೆನಿಸದ ಆಹಾರ, ಕಾಮ, ಕೋಪ, ಅತಿಆಸೆ, ಭಯ, ಬೇಸರ ಇವೆಲ್ಲವುಗಳಿಂದಲೂ ಬಾಯಿರುಚಿ ಕೆಡುವುದರಿಂದ ಅವುಗಳನ್ನು ತ್ಯಜಿಸುವುದರಲ್ಲಿ ಒಳಿತಿದೆ.